ಸ್ಮಾರ್ಟ್ ಫೋನ್ ಖರೀದಿಸಲು ಹಣವಿಲ್ಲವೆಂದು ಮಾವಿನಹಣ್ಣು ಮಾರಾಟ ಮಾಡಿದ ಪೋರಿ | ಆಕೆ ಅದರಿಂದ ಸಂಪಾದಿಸಿದ್ದು ಮಾತ್ರ ಬರೋಬ್ಬರಿ 1.20 ಲಕ್ಷ ರೂಪಾಯಿ!!
ಜಾರ್ಖಂಡ್: ಪ್ರಯತ್ನದ ಜತೆಗೆ ಅದೃಷ್ಟವೂ ಇದ್ದರೆ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಈ ಪುಟ್ಟ ಬಾಲಕಿಯೇ ಸಾಕ್ಷಿ. ಆನ್‌ಲೈನ್ ಕ್ಲಾಸ್‌ಗೆ ಸ್ಮಾರ್ಟ್‌ಫೋನ್ ಖರೀದಿಸಲು ದುಡ್ಡಿಲ್ಲದೇ, ಶಾಲೆಯನ್ನು ತಪ್ಪಿಸಬೇಕಾದ ಆತಂಕದಲ್ಲಿಯೇ ಮಾವಿನ ಹಣ್ಣಿನ ಮಾರಾಟಕ್ಕಿಳಿದ ಈ ಬಾಲಕಿಯ ಜೀವನದಲ್ಲಿ ಆಗಿದ್ದನ್ನು ನಂಬಲು ಸ್ವಲ್ಪ ಕಷ್ಟವೇ!!
ಜಮೆಡುರದ 11 ವರ್ಷದ ಬಾಲಕಿ ತುಳಸಿ ಕುಮಾರ್ ಳ ಕಥೆಯಿದು. ಕಡುಬಡತನದಲ್ಲಿ ಇರುವ ಈಕೆಗೆ ಆನ್‌ಲೈನ್ ಕ್ಲಾಸ್‌ಗೆ ಫೋನ್ ಬೇಕಿತ್ತು. ಆರ್ ಮೊಬೈಲ್ ಖರೀದಿಗೆ ದುಡ್ಡು ಇರಲಿಲ್ಲ. ತನಗೆ ಯಾರಾದ ಸಹಾಯ ಮಾಡಿ ಎಂದು ಚಾನೆಲ್ ಒಂದರಲ್ಲಿ ಈಕೆ ಕೋರಿಕೊಂಡಳು. ಆದರೆ ಆ ಮನವಿ ಈಡೇರಲಿಲ್ಲ. ಆಕೆಗೆ ಯಾವ ಸಹಾಯವೂ ಸಿಗಲಿಲ್ಲ.
ಕೊನೆಯದಾಗಿ ಪಟ್ಟುಬಿಡದೆ ಮಾವಿನಹಣ್ಣಿನ ಮಾರಾಟಕ್ಕೆ ನಿಂತಳು. ಈ ವಿಷಯ ಅಲ್ಲಿನ ವ್ಯಾಲುಯೇಬಲ್ ಎಜುಟೇಂಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅಮೆಯಾ ಅವರ ಕಿವಿಗೆ ಬಿತ್ತು. ಈ ಬಾಲಕಿ ಮಳೆ-ಗಾಳಿ ಎನ್ನದೇ ದುಡ್ಡು ಸಂಗ್ರಹಕ್ಕೆ ಬೀದಿಗಿಳಿದು ಮಾವಿನಹಣ್ಣಿನ ವ್ಯಾಪಾರ ಮಾಡುವಲ್ಲಿ ಖುದ್ದು ಆಸಕ್ತಿ ತೋರಿರುವ ಬಗ್ಗೆ ಅವರಿಗೆ ಖುಷಿಯಾಯಿತು. ಸ್ವಂತ ದುಡಿಮೆಯಿಂದ ಶಿಕ್ಷಣ ಪಡೆಯಲು ಈಕೆ ಇಚ್ಛಿಸಿರುವುದನ್ನು ಕಂಡು ಕಣ್ತುಂಬಿಸಿಕೊಂಡ ಅಮೆಯಾ ಅವರು, ಈ ಬಾಲಕಿಯಿಂದ ಒಂದು ಡಜನ್ ಮಾವಿನ ಹಣ್ಣನ್ನು ಖರೀದಿಸಿದರು.
ನಂತರ ಆಕೆಯ ತಂದೆಯ ಬಳಿಗೆ ಹೋಗಿ ಒಂದು ಡಜನ್ ಮಾವಿನಹಣ್ಣಿಗೆ 1.20ಲಕ್ಷ ರೂಪಾಯಿ ನೀಡಿದರು! ಒಂದೊಂದು ಮಾವಿನ ಹಣ್ಣಿಗೆ 10 ಸಾವಿರ ರೂಪಾಯಿಯಂತೆ ಇವರು ಹಣ ನೀಡಿದರು. ಈಕೆಗೆ ಸ್ಮಾರ್ಟ್‌ಫೋನ್ ಮಾತ್ರವಲ್ಲದೇ, ಅವಳ ಶೈಕ್ಷಣಿಕ ಭವಿಷ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನೂ ಈ ಹಣದಿಂದ ಮಾಡುವಂತೆ ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಮೆಯಾ, ಬಾಲಕಿ ಸ್ಮಾರ್ಟ್‌ಫೋನ್ ಇಲ್ಲವೆಂದು ತನ್ನ ಹಣೆಬರಹವನ್ನು ದೂರುತ್ತಾ ಕೂರಲಿಲ್ಲ ಅಥವಾ ಭಿಕ್ಷೆ ಬೇಡಲಿಲ್ಲ. ಮಾವಿನ ಹಣ್ಣಿನ ಮಾರಾಟ ಮಾಡುವುದನ್ನು ಕಂಡು ನನಗೆ ಇನ್ನಿಲ್ಲದ ಖುಷಿಯಾಯಿತು. ಇದೇ ಕಾರಣಕ್ಕೆ ಹಣ ಕೊಟ್ಟೆ. ಇದು ದೇಣಿಗೆಯಲ್ಲ, ಬದಲಿಗೆ ಮಾವಿನಹಣ್ಣುಗಳನ್ನು ಖರೀದಿ ಮಾಡಿದ್ದೇನೆ. ಜೀವನದಲ್ಲಿ ಹೋರಾಡುವುದನ್ನು ಬಿಡಬೇಡ ಎಂದು ಆಕೆಗೆ ಪ್ರೋತ್ಸಾಹ ನೀಡಲು ಈ ನೆರವು ಎಂದಿದ್ದಾರೆ.
ಏನೇ ಆಗಲಿ ಆಕೆ ಹಣವಿಲ್ಲವೆಂದು ಕೈಕಟ್ಟಿ ಕೂರದೆ ಏನಾದರೂ ಮಾಡಿ ಸ್ಮಾರ್ಟ್ ಫೋನ್ ಖರೀದಿಸಬೇಕೆಂದು ದೃಢಸಂಕಲ್ಪ ತೋರಿದ್ದು ತುಂಬಾ ಮಕ್ಕಳಿಗೆ ಸ್ಪೂರ್ತಿಯಾಗಿದೆ.