ಗಾಯಗೊಂಡು ಸೊಂಟದ ಬಲ ಕಳೆದುಕೊಂಡಿದ್ದ ನಾಯಿಗೆ ಹೊಸ ಬದುಕು ಕಲ್ಪಿಸಿದ ಹೊಸಂಗಡಿಯ ಯುವತಿ
ಕಾಲಿಗೆ ಚಕ್ರ ಸಿಕ್ಕಿಸಿಕೊಂಡು ಓಡಾಡುವ ನಾಯಿ ಮರಿಯ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ನಾಯಿಯ ಸದ್ಯದ ಸಂತೋಷದ ಹಿಂದಿನ ಸಂಕಟದ ಕಥೆ ಇಲ್ಲಿದೆ.ನಾಯಿಯ ಸಂಕಟ ದೂರ ಮಾಡಿದ ಯುವತಿಯ ಶ್ರಮ,ಮಾನವೀಯತೆಯ ಅನಾವರಣ ಇಲ್ಲಿದೆ.
ಸೊಂಟದ ಬಲ ಕಳೆದುಕೊಂಡ ನಾಯಿಗೆ ತನ್ನ ಕೌಶಲ್ಯದಿಂದ ಉಪಕರಣ ತಯಾರಿಸಿ ನಾಯಿಗೆ ಹೊಸ ಬದುಕು ನೀಡಿದ ಉಡುಪಿ ಜಿಲ್ಲೆಯ ಕುಂದಾಪುರದ ಹೊಸಂಗಡಿಯಲ್ಲಿ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಪ್ರಿಯಾ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಿಯಾ ಅವರು ಕಾಲೇಜಿಗೆ ಹೋಗುತ್ತಿದ್ದಾಗ ಹೊಸಂಗಡಿಯ ರಸ್ತೆ ಬದಿಯಲ್ಲಿ 3-4 ತಿಂಗಳ ವಯಸ್ಸಿನ ನಾಯಿಮರಿ ಅಪಘಾತದಲ್ಲಿ ಹಿಂದಿನ ಎರಡೂ ಕಾಲುಗಳನ್ನು ಕಳೆದುಕೊಂಡು ಯಾತನಮಯ ಜೀವನ ನಡೆಸುತ್ತಿತ್ತು.ನಾಯಿಯು ಮುಂಭಾಗದ ಕಾಲುಗಳಿಂದ ಮಾತ್ರ ಓಡಾಡುತ್ತಿತ್ತು.
ಆ ದಾರಿಯಾಗೆ ಸಂಚರಿಸುತ್ತಿಸ್ದ ಪ್ರಿಯಾ ಅವರು ನಾಯಿಯ ಈ ಶೋಚನೀಯ ಸ್ಥಿತಿ ಕಂಡು ಮರುಗಿ,ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿದ ತನ್ನ ಮನೆಯಲ್ಲೇ ಉಳಿಸಿಕೊಂಡು ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ. ಕಾಲು ಹಾಗೂ ಸೊಂಟದ ಸ್ವಾಧೀನ ತಪ್ಪಿದ್ದರಿಂದ ನಾಯಿ ತೆವಳಿಕೊಂಡೇ ಸಾಗುತ್ತಿತ್ತು.
ಪ್ರಿಯಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ನಾಯಿ ಮಾಮೂಲಿಯಂತೆ ಓಡಾಡುವಂತಾಗಬೇಕು ಎಂಬ ಉದ್ದೇಶದಿಂದ ಎರಡು ಉದ್ದದ ಪಿವಿಸಿ ಪೈಪ್ ಬಳಸಿ ಹೊಟ್ಟೆ ಕೆಳಭಾಗಕ್ಕೆ ವೀ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಪಶು ಆಸ್ಪತ್ರೆಯಲ್ಲಿ ಕೃತಕ ಗರ್ಭಧಾರಣೆ ಮಾಡಲು ಅಳವಡಿಸುವ ಮಾದರಿಯಂತೆ ಮಾಡಿ, ಸೊಂಟದ ಬಳಿ ಎರಡೆರಡು ಕಡೆ ಪಟ್ಟಿಗೆ ಮತ್ತೆ ಎರಡು ಪೈಪ್ ಜೋಡಿಸಿದರು.
ಸೊಂಟದ ಬಳಿ ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನೆಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ತಾಗಿಕೊಳ್ಳುವಂತೆ ಮಾಡಿದರು. ಗಾಲಿ ಗಾಡಿ ನಾಯಿಗೆ ಕಟ್ಟಿ ಓಡಾಟದ ಅಭ್ಯಾಸವನ್ನೂ ಮಾಡಿಸಿದರು.
ಪ್ರಿಯಾ ಅವರ ಉದ್ದೇಶದಂತೆ ನಾಯಿ ಈಗ ಗಾಲಿ ಗಾಡಿಯಲ್ಲಿ ಎಲ್ಲೆಂದರಲ್ಲಿ ಖುಷಿ ಖುಷಿಯಾಗಿ ಸಂಚರಿಸುತ್ತಿದೆ.
ನಾಯಿಮರಿಗೆ ಅಪಘಾತದಲ್ಲಿ ಬೆನ್ನಿನ ಭಾಗ ಹಾಗೂ ಎರಡೂ ಕಾಲು ನಿಷ್ಕ್ರಿಯವಾಗಿತ್ತು. ಕಾಲುಗಳು ಸೋಂಕಿಗೆ ಒಳಗಾಗಿದ್ದಲ್ಲದೇ ಗಾಯಗಳಾಗಿತ್ತು. ಒಂದು ದಿನ ಆಹಾರ ಕೊಟ್ಟದ್ದನ್ನೇ ನೆನಪಿಸಿ ತೀಕ್ಷ್ಣ ಶಕ್ತಿ ಮೂಲಕ ನನ್ನ ಮನೆ ಗುರುತಿಸಿ ಬಾಗಿಲ ಬಳಿ ಬಂದಿತ್ತು.ಪಶುವೈದ್ಯರ ಬಳಿಗೆ ಕರೆದೊಯ್ದು ಉಪಚರಿಸಿದೆ. ಹಿಂಭಾಗದ ಸ್ವಾಧೀನ ಮರಳುವುದು ಕಷ್ಟ ಎಂದರು. ನಾಯಿಗೆ ಮತ್ತೆ ಅದರ ಬದುಕು ಕಟ್ಟಿಕೊಡಲು ಗಾಡಿ ಮಾಡಿದೆ.
Very good Priya God bless you