ಜುಲೈ 31ರೊಳಗೆ ಒಟ್ಟು 51.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯ, ಈಗಾಗಲೇ 35.6 ಕೋಟಿಯನ್ನು ಪೂರೈಸಲಾಗಿದೆ | ಕೇಂದ್ರ ಸರ್ಕಾರ

ನವದೆಹಲಿ: ಜುಲೈ 31ರೊಳಗೆ ಒಟ್ಟು 51.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗಲಿದೆ, ಅದರಲ್ಲಿ ಈಗಾಗಲೇ 35.6 ಕೋಟಿಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರವು ಶನಿವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ.

ಮಕ್ಕಳ ಲಸಿಕೆಯ ಸ್ಥಿತಿಗತಿಯನ್ನು ನೀಡಿದ ಕೇಂದ್ರ ಸರ್ಕಾರ, 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಮೇ 12ರಂದು ಅನುಮತಿ ನೀಡಿದ್ದಾರೆ. ಈ ಪ್ರಯೋಗಕ್ಕೆ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವುದಾಗಿ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.

ಡಿಎನ್‌ಎ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಜಿಡಸ್ ಕ್ಯಾಡಿಲಾ 12 ರಿಂದ 18 ವರ್ಷದೊಳಗಿನವರ ಪ್ರಾಯೋಗಿಕ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಶಾಸನ ಬದ್ಧ ಅನುಮತಿಗಳಿಗೆ ಒಳಪಟ್ಟು, 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಆದಷ್ಟು ಬೇಗ ಲಭ್ಯವಾಗಬಹುದು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಜುಲೈ ನಲ್ಲಿ ಈ ಲಸಿಕೆ ಸಿಗುವ ಸಾಧ್ಯತೆ ಇದೆ.

ದೇಶದಲ್ಲಿ ಕೋವಿಡ್-19 ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಮಾತ್ರ 18 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಲಸಿಕೆಗಾಗಿ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಲಸಿಕೆ ನೀಡಿಕೆಗೆ ಶಿಫಾರಸು ಮಾಡುತ್ತಿಲ್ಲ .ಸಂಪೂರ್ಣ ಅರ್ಹ ಜನಸಂಖ್ಯೆಗೆ ಲಸಿಕೆ ನೀಡುವಷ್ಟು ಲಸಿಕೆ ಲಭ್ಯವಿದೆ ಎಂದು ಸರ್ಕಾರ ಹೇಳಿದೆ.

Leave A Reply

Your email address will not be published.