ನೀವೇನು ಗೆಣಸು ಕೀಳೊದಕ್ಕಿರೋದಾ ? | ಖಾಸಗಿ ಶಾಲಾ ಶುಲ್ಕ ಫೈನಲ್ ಮಾಡದ ಶಿಕ್ಷಣ ಸಚಿವರಿಗೆ ಹಿಗ್ಗಾಮುಗ್ಗಾ ಬಾರಿಸಿದ ಪೋಷಕರು

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ನಾರಾಯಣ ಇ-ಟೆಕ್ನೋ ಶಾಲಾ ಮಕ್ಕಳ ಪೋಷಕರು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಶಿಕ್ಷಣ ಸಚಿವರ ಪಂಚೇಂದ್ರಿಗಳೇ ಸತ್ತು ಹೋಗಿದೆ. ಅವರ ತೆವಲನ್ನ ತೀರಿಸಿಕೊಳ್ಳಲು ಹೀಗೆಲ್ಲ ನಡೆದುಕೊಳ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸೊಲ್ಲ ಅಂದ್ರೆ ಸಚಿವ ಸ್ಥಾನದಲ್ಲಿ ಯಾಕಿದ್ದೀರಿ? ಸಚಿವ ಸ್ಥಾನ ನಿಭಾಯಿಸೋಕೆ ಆಗೊಲ್ಲ ಅಂತೇಳಿ ಕೆಳಗಿಳಿಯಿರಿ ಎಂದು ಪೋಷಕರು ಖಾರವಾಗಿಯೇ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಿಕ್ಷಣ ಸಚಿವರ ಕಿವಿ ಸತ್ತೋಗಿದ್ಯಾ.? ಸುರೇಶ್ ಕುಮಾರ್ ಜವಾಬ್ದಾರಿಯುತ ನಿರ್ಧಾರ ಕೈಗೊಂಡಿದ್ದರೆ ನಿಮ್ಮೆ ಇಂತಹ ಪರಿಸ್ಥಿತಿ ಬರ್ತಾ ಇರಲಿಲ್ಲ. ಪೋಷಕರ ಸಮಸ್ಯೆ ಬಗೆಹರಿಸಲು ಶಿಕ್ಷಣ ಸಚಿವರು ವಿಫಲರಾಗಿದ್ದಾರೆ ಎಂದು ಶಿಕ್ಷಣ ಸಚಿವರ ವಿರುದ್ಧನಾರಾಯಣ ಇ-ಟೆಕ್ನೋ ಶಾಲಾ ಮಕ್ಕಳ ಪೋಷಕರು ರೋಷಾಗ್ನಿ ಸುರಿಸಿದರು.

ಸಮಸ್ಯೆಯನ್ನು ಪೋಷಕರು ಮತ್ತು ಖಾಸಗಿ ಶಾಲೆಗಳೇ ಬಗೆಹರಿಸಿಕೊಳ್ಳಬೇಕು ಅಂತೀರಾ. ನೀವೇನು ಗೆಣಸು ಕೀಳೋಕೆ ಇದ್ದೀರಾ..? ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಗೆ ಪೋಷಕರು ನೇರವಾಗಿ ಪ್ರಶ್ನೆ ಮಾಡಿದರು. ನಿಮ್ಮ ಕೈಲಿ ನಿಭಾಯಿಸೋಕೆ ಆಗೋಲ್ಲ ಅಂದ್ರೆ ಶಿಕ್ಷಣ ಇಲಾಖೆಯನ್ನು ಮುಚ್ಚಿಬಿಡಿ. ಸುರೇಶ್ ಕುಮಾರ್ ಗೆ ನಾಚಿಕೆ ಆಗ್ಬೇಕು ಎಂದೆಲ್ಲಾ ಪೋಷಕರು ಬೈಗುಳಗಳ ಸುರಿಮಳೆಗೆರೆದರು.

ಕೂಡಲೇ ಆನ್‌ಲೈನ್ ಕ್ಲಾಸ್ ವ್ಯವಸ್ಥೆ ಮಾಡಿಸಬೇಕು. ಪೂರ್ಣ ಶುಲ್ಕ ಕಟ್ಟುವುದಕ್ಕೆ ಒತ್ತಾಯಿಸದಂತೆ ಶಾಲೆಗೆ ಸೂಚನೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿ ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ಕೊ ಶಾಲೆ ಎದುರು ಪೋಷಕರು ಇಂದು ಬೆಳಗ್ಗೆ 10.30ರಿಂದ ಕಾಯುತ್ತಾ ಕುಳಿತಿದ್ದರು.

ಬಿಇಒ ಬಂದು ಸಮಸ್ಯೆ ಬಗೆಹರಿಸುವವರೆಗೆ ಸ್ಥಳದಿಂದ ತೆರಳಲ್ಲ ಎಂದು ನಾರಾಯಣ ಇ-ಟೆಕ್ನೋ ಶಾಲೆ ಮುಂದೆ ಪೋಷಕರು ಆಕ್ರೋಶಭರಿತರಾಗಿದ್ದರು. ಊಟದ ಸಮಯವೂ ಮೀರಿ ಮಧ್ಯಾಹ್ನವಾದರೂ ಸ್ಥಳಕ್ಕೆ ಅಧಿಕಾರಿಗಳು ಬಂದು, ಸಮಸ್ಯೆ ಇತ್ಯರ್ಥ ಮಾಡದಿರುವುದರಿಂದ ಶಾಲೆಯ ಮುಂಭಾಗವೇ ಕುಳಿತು ಪೋಷಕರು ಊಟ ಮಾಡಿದ್ದಾರೆ.

ಈ ಮಧ್ಯೆ ನಾರಾಯಣ ಇ-ಟೆಕ್ನೋ ಶಾಲೆಗೆ ಬೆಂಗಳೂರು ಉತ್ತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಮೇಶ್ ಒಮ್ಮೆ ಭೇಟಿ ಕೊಟ್ಟು, ಪೋಷಕರ ಜೊತೆ ಕೆಲಕಾಲ ಚರ್ಚೆ ನಡೆಸಿದ ಶಾಸ್ತ್ರ ಮಾಡಿದರು. ಕೂಡಲೇ ಆನ್‌ಲೈನ್ ಕ್ಲಾಸ್ ವ್ಯವಸ್ಥೆ ಮಾಡಿಸಿ. ಜೊತೆಗೆ ಪೂರ್ಣ ಶುಲ್ಕ ಕಟ್ಟುವಂತೆ ಒತ್ತಾಯಿಸದಂತೆ ಶಾಲೆಗೆ ಸೂಚನೆ ನೀಡಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಂತೆ ಬಿಇಒ ರಮೇಶ್ ಸ್ಥಳದಿಂದ ಕಾಲ್ಕಿತ್ತರು.

ಮಧ್ಯಾಹ್ನ 2.30ಕ್ಕೆ ಸಭೆ ಇದೆ, ಊಟ ಮಾಡಿ ಬರುತ್ತೇನೆಂದು ಬಿಇಒ ರಮೇಶ್ ತೆರಳಿದ್ದರು. ಆದರೆ ಇನ್ನೂ ವಾಪಸಾಗಿಲ್ಲ. ಈ ಮಧ್ಯೆ ಬಿಇಒ ಬಂದು ಸಮಸ್ಯೆ ಬಗೆಹರಿಸುವವರೆಗೂ ನಾವು ಶಾಲೆಯ ಎದುರಲ್ಲೇ ಕುಳಿತಿರುತ್ತೇವೆ ಎಂದು ಶಾಲೆ ಎದುರು ಪೋಷಕರು ಪಟ್ಟುಹಿಡಿದು ಕುಳಿತರು. ಆ ವೇಳೆ ಮೇಲಿನಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ಕೇವಲ ಒಂದು ಶಾಲೆಯ ಪರಿಸ್ಥಿತಿಯಲ್ಲ. ಹೀಗೆ ರಾಜ್ಯದ ಹಲವು ಶಾಲೆಗಳಲ್ಲಿ ಈ ರೀತಿಯ ಆನ್ಲೈನ್ ಗ್ಲಾಸ್ ಹಾಗೂ ಶುಲ್ಕ ಸಂಬಂಧಿ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆಲ್ಲ ಸರ್ಕಾರ ಯಾವ ರೀತಿಯ ಪರಿಹಾರ ನೀಡುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.