ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಮೇಲೆ ಫೈರಿಂಗ್ | ಪೊಲೀಸರ ಮೇಲೆ ಹಲ್ಲೆ ಮಾಡಲೆತ್ನಿಸಿದಾಗ ಗುಂಡು ಹಾರಾಟ

ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು,ಈ ವೇಳೆ ಬಂಧನ ಪೊಲೀಸರ ಮೇಲೆ ಹಲ್ಲೆಗೆ ಆರೋಪಿಗಳು ಮುಂದಾದಾಗ ಅವರ ಕಾಲಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ.

ರೇಖಾ ಕದಿರೇಶ್ ಅವರ ಸಂಬಂಧಿಗಳಾದ ಪೀಟರ್ ಮತ್ತು ಸೂರ್ಯ ಬಂಧಿತ ಆರೋಪಿಗಳು.

ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್ ಪೆಕ್ಟರ್ ಚಿದಾನಂದ್ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಏನಿದು ಪ್ರಕರಣ


ನಿನ್ನೆ ಬೆಳಗ್ಗೆ 10.10ರ ಸುಮಾರಿಗೆ ಮನೆಯಿಂದ ಸುಮಾರು ನೂರು ಮೀಟರ್‌ ದೂರದಲ್ಲಿರುವ ಕಚೇರಿಯಲ್ಲಿ ರೇಖಾ ಕದಿರೇಶ್ ಅವರು ಎಂದಿನಂತೆ ಬಡವರಿಗೆ ಊಟ ವಿತರಿಸಿ ಮನೆಗೆ ಹಿಂದಿರುಗುತ್ತಿದ್ದರು.

ರೇಖಾ ಕದಿರೇಶ್

ಈ ವೇಳೆ ಬೈಕ್‌ ನಲ್ಲಿ ಬಂದ ಇಬ್ಬರು ಆಗಂತುಕರು ರೇಖಾ ಅವರ ಹೊಟ್ಟೆ ಸೇರಿ ದೇಹದ ವಿವಿಧೆಡೆ 15ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿದ್ದರು.
ಮೂರು ವರ್ಷಗಳ ಹಿಂದೆ ಛಲವಾದಿಪಾಳ್ಯ ವಾರ್ಡ್‌ನ ಮುನೇಶ್ವರ ದೇವಾಲಯದ ಬಳಿ ಕದಿರೇಶ್‌ ಅವರನ್ನು ಹತ್ಯೆಗೈದ ರೀತಿಯಲ್ಲೇ ಅವರ ಪತ್ನಿ ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಅವರನ್ನೂ ಕೊಲೆಗೈಯಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಪೀಟರ್‌, 2018ರಲ್ಲಿ ಕೊಲೆಯಾದ ಕದಿರೇಶ್‌ ಹತ್ಯೆಯ ಮಾಸ್ಟರ್‌ ಮೈಂಡ್‌ ಶೋಭನ್‌ ಗ್ಯಾಂಗ್‌ ನಲ್ಲಿ ಗುರುತಿಸಿಕೊಂಡಿದ್ದ.

ಆದರೂ ಕದಿರೇಶ್‌ ತನ್ನಸಂಬಂಧಿ ಯುವತಿಯನ್ನು ಪೀಟರ್‌ ಜತೆ ಮದುವೆ ಮಾಡಿಸಿದ್ದ. ಬಳಿಕ ಎಲ್ಲರೂ ಚೆನ್ನಾಗಿದ್ದರು. ಈ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಕದಿರೇಶ್‌ ಪೀಟರ್‌ ಗೆ ಗಾರ್ಬೆಜ್‌ ಬಿಲ್‌ವೊಂದನ್ನು ಮಾಡಿಕೊಟ್ಟಿದ್ದ. ಆದರೆ, ಕದಿರೇಶ್‌ ಕೊಲೆಯಾದ ಬಳಿಕ ರೇಖಾ ಅದನ್ನು ತಡೆ ಹಿಡಿದಿದ್ದರು. ಆದರೂ ಆಕೆಯ ಜತೆ ಇದ್ದು ಪ್ರತಿಯೊಂದು ಕೆಲಸವನ್ನು ಪೀಟರ್‌ ನಿರ್ವಹಿಸುತ್ತಿದ್ದ.

ಹೊಸ ಮನೆ ನಿರ್ಮಾಣಕ್ಕೆ ಹಣ ಕೊಡುವುದಾಗಿ ಹೇಳಿದ್ದ ರೇಖಾ ಅದಕ್ಕೂ ಸಹಾಯ ಮಾಡಿರಲಿಲ್ಲ. ಅದರಿಂದ ಬೇಸತ್ತಿದ್ದ ಪೀಟರ್‌, ರೇಖಾ ವಿರುದ್ಧ ಅಸಮಾಧಾನಗೊಂಡಿದ್ದ ಎನ್ನಲಾಗಿದೆ.

ಮತ್ತೋರ್ವ ಆರೋಪಿ ಸೂರ್ಯ ಕೂಡ ಕದಿರೇಶ್‌ ಸಂಬಂಧಿಯಾಗಿದ್ದು, ಅವರ ವಿರುದ್ಧ ಕಾಟನ್‌ಪೇಟೆಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿದೆ. ಸಂಬಂಧಿಗಳಾಗಿದ್ದರೂ ಕದಿರೇಶ್‌ ಸಂಬಂಧಿಗಳಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿರಲಿಲ್ಲ. ರೇಖಾ ಬಳಿ ಕೇಳಿಕೊಂಡಿದ್ದರೂ ಆಕೆಯೂ ಯಾವುದೇ ನೆರವು ನೀಡಿರಲಿಲ್ಲ. ಅದರಿಂದ ಆಕ್ರೋಶಗೊಂಡಿದ್ದ ಇವರು ರೇಖಾ ಅವರ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾವಹಿಸಿ ಹತ್ಯೆ ಮಾಡಿಯೇ ಬಿಟ್ಟಿದ್ದಾರೆ.

Leave A Reply

Your email address will not be published.