ಹೊಸದಾಗಿ ಬಂದಿದೆ ಮನೆ ಬಾಡಿಗೆ ನೀತಿ | ಟೆನೆನ್ಸಿ ಕಾನೂನಿನ ಪ್ರಮುಖ ಅಂಶಗಳು ಹೀಗಿವೆ

ಜೂನ್ 2, 2021 ರಂದು ಹೊಸ ಮಾಡೆಲ್ ಟೆನೆನ್ಸಿ ಆಕ್ಟ್ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆ ಮತ್ತು ಶೀಘ್ರದಲ್ಲಿ ಜಾರಿಗೆ ಬರಲಿದೆ. ಅಂದರೆ ಹೊಸದಾಗಿ ಬಾಡಿಗೆ ಕಾನೂನನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಮತ್ತು ಅದಕ್ಕೆ ಬೇಕಾದ ಒಪ್ಪಿಗೆಯನ್ನ ಕೂಡ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪಡೆದುಕೊಂಡಿದೆ.

ಹೊಸ ಟೆನೆನ್ಸಿ ಆಕ್ಟ್ ನಲ್ಲಿ ಏನಿದೆ?

2011 ರ ಜನಗಣತಿಯಲ್ಲಿ ಒಂದು ಕೋಟಿ ಹತ್ತು ಲಕ್ಷ ಮನೆಗಳು ಖಾಲಿ ಅಥವಾ ಬೀಗ ಹಾಕಲ್ಪಟ್ಟಿವೆ ಎನ್ನುವುದನ್ನ ಕೇಂದ್ರ ಸರಕಾರ ಗಮನಿಸಿದೆ. ಅಲ್ಲದೆ 2021ರಲ್ಲಿ ಈ ಸಂಖ್ಯೆ ದುಪ್ಪಟಾಗಿರುವ ಸಾಧ್ಯತೆಯನ್ನ ಕೂಡ ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ರೀತಿ ಖಾಲಿ ಇರುವ ಮನೆಗಳು ಬಾಡಿಗೆಗೆ ಕೊಟ್ಟಿರುವ ಸಾಧ್ಯತೆ ಬಹಳವಿದೆ. ಬಾಡಿಗೆ ಆದಾಯವನ್ನ ಸರಕಾರದ ತೆರಿಗೆಯಿಂದ ವಂಚಿಸಲು ಈ ರೀತಿ ಖಾಲಿ ಇದೆ ಎಂದಿರುವ ಸಾಧ್ಯತೆ ಬಹಳ ಹೆಚ್ಚು. ಹೀಗಾಗಿ ಇಂತಹ ಲೆಕ್ಕವಿಲ್ಲದ ಬಾಡಿಗೆದಾರರನ್ನ ಕೂಡ ಸರಕಾರದ ಲೆಕ್ಕದಲ್ಲಿ ತರುವುದು ಪ್ರಮುಖ ಉದ್ದೇಶ.

ಎಲ್ಲಕ್ಕೂ ಮೊದಲಿಗೆ ಬಾಡಿಗೆ ಕರಾರು ಪತ್ರವನ್ನ ನೋಂದಾವಣಿ ಮಾಡಿಕೊಳ್ಳಬೇಕು, ರೆಂಟ್ ಅಥಾರಿಟಿ ಎನ್ನುವ ವೆಬ್ಸೈಟ್ ನಲ್ಲಿ ನಿಗದಿತ ಎಲ್ಲಾ ಕಾಗದ ಪತ್ರಗಳನ್ನ ಅಪ್ಲೋಡ್ ಮಾಡಿ ಬಾಡಿಗೆ ಪತ್ರವನ್ನ ನೊಂದಾಯಿಸಿಕೊಳ್ಳಬೇಕು. ಮಾಲೀಕ ಮತ್ತು ಬಾಡಿಗೆದಾರ ಇಬ್ಬರಿಗೂ ಒಂದು ಕರಾರು ಪತ್ರವನ್ನ ನೀಡಲಾಗುತ್ತದೆ. ಇದಕ್ಕೆ ಸಂಬಂಧಿತ ನೋಂದಾವಣಿ ಸಂಖ್ಯೆಯನ್ನ ಕೂಡ ಕೊಡಲಾಗುತ್ತದೆ. ಇದಕ್ಕೆ ಪೂರಕವಾದ ಎಲ್ಲಾ ಪತ್ರಗಳ ಒಂದು ನಕಲು ರೆಂಟ್ ಆಥಾರಿಟಿ ಕೂಡ ಇಟ್ಟು ಕೊಂಡಿರುತ್ತದೆ.

  1. ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿಗಳು ಬಾಡಿಗೆ ಸಂಬಂಧಿಸಿದ ಅಹವಾಲುಗಳನ್ನ ಸ್ವೀಕರಿಸಲು ಇರಲಿದ್ದಾರೆ, ಹಾಗೆಯೇ ರೆಂಟ್ ಕೋರ್ಟ್ಸ್ ಕೂಡ ತಲೆಯೆತ್ತಲಿವೆ. ಅಂದರೆ ಬಾಡಿಗೆಗೆ ಸಂಬಂಧಪಟ್ಟ ಯಾವುದೇ ಫಿರ್ಯಾದುಗಳಿದ್ದರೆ ಅದನ್ನ ಇದಕ್ಕೆಂದೆ ಇರುವ ಕೋರ್ಟುಗಳಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಹೀಗಾಗಿ ಕೇಸುಗಳ ವಿಲೇವಾರಿ ವೇಗವಾಗಿ ಮಾಡಬಹುದು.
  2. ಮನೆಯನ್ನ ಬಾಡಿಗೆ ಕೊಡುವ ಮಾಲೀಕ , ಬಾಡಿಗೆದಾರನಿಂದ ಕೇವಲ ಎರಡು ತಿಂಗಳ ಬಾಡಿಗೆಯನ್ನ ಮುಂಗಡ ಹಣವನ್ನಾಗಿ ಪಡೆಯಬಹುದು, ಕಮರ್ಷಿಯಲ್ ಕಟ್ಟಡಗಳ ವಿಷಯದಲ್ಲಿ ಆರು ತಿಂಗಳ ಬಾಡಿಗೆಯನ್ನ ಮುಂಡಗವಾಗಿ ಪಡೆಯುವ ಅವಕಾಶವಿದೆ.
  3. ಬಾಡಿಗೆದಾರ ಎರಡು ತಿಂಗಳು ಬಾಡಿಗೆ ಹಣವನ್ನ ನೀಡದಿದ್ದರೆ ಅವನನ್ನ ಮನೆಯಿಂದ ಹೊರಹಾಕಲು ರೆಂಟ್ ಕೋರ್ಟ್ ಗೆ ದೂರನ್ನ ನೀಡಬಹುದು. ಬಾಡಿಗೆದಾರ ತಕ್ಷಣ ಮನೆಯನ್ನ ಖಾಲಿ ಮಾಡಿದರೆ ಎರಡು ತಿಂಗಳ ಬಾಡಿಗೆ ಮತ್ತು ಬಡ್ಡಿಯನ್ನ ಸಹ ನೀಡಬೇಕಾಗುತ್ತದೆ. ಎರಡು ತಿಂಗಳ ನಂತರವೂ ಖಾಲಿ ಮಾಡದೆ ಕೋರ್ಟಿನ ಆದೇಶವನ್ನ ಕಾಯುತ್ತ ಕುಳಿತರೆ ಬಾಡಿಗೆಯ ದುಪಟ್ಟು ಹಣವನ್ನ ನೀಡಬೇಕಾಗುತ್ತದೆ. ಉದಾಹರಣೆಗೆ ಬಾಡಿಗೆದಾರ ಎರಡು ತಿಂಗಳ ಬಾಡಿಗೆ ನೀಡಲಿಲ್ಲ ಮತ್ತು ಕೋರ್ಟಿನ ಆದೇಶ ಬರುವವರೆಗೂ ಕಾಯುತ್ತ ಕುಳಿತ್ತಿದ್ದಾನೆ ಎಂದುಕೊಳ್ಳಿ. ಕೋರ್ಟಿನ ಆದೇಶ ಬರಲು ಮತ್ತರೆಡು ತಿಂಗಳಾಯ್ತು ಎಂದುಕೊಳ್ಳಿ, ಅಂತಹ ಸಂದರ್ಭದಲ್ಲಿ ಮೊದಲ ಎರಡು ತಿಂಗಳ ಬಾಡಿಗೆ ಮತ್ತು ಬಡ್ಡಿ ನೀಡಬೇಕು, ಮೂರನೇ ಮತ್ತು ನಾಲ್ಕನೇ ತಿಂಗಳು ಬಾಡಿಗೆಯ ದುಪ್ಪಟ್ಟು ನೀಡಬೇಕಾಗುತ್ತದೆ. ಅಂದರೆ ಬಾಡಿಗೆ ಹತ್ತು ಸಾವಿರವಿದ್ದರೆ, ಮೂರನೇ ಮತ್ತು ನಾಲ್ಕನೇ ತಿಂಗಳು ತಲಾ ಇಪ್ಪತ್ತು ಸಾವಿರ ನೀಡಬೇಕಾಗುತ್ತದೆ. ಕೆಲವೊಮ್ಮೆ ಕೋರ್ಟಿನ ಆದೇಶ ಬರುವುದು ಇನ್ನು ತಡವಾದರೆ ಮುಂದಿನ ಆರು ತಿಂಗಳ ವರೆಗೆ ನಾಲ್ಕು ಪಟ್ಟು ಹೆಚ್ಚು ಬಾಡಿಗೆಯನ್ನ ನೀಡಬೇಕಾಗುತ್ತದೆ. ಅಂದರೆ ಮಾಸಿಕ ಹತ್ತು ಸಾವಿರದ ಬಾಡಿದೆ ನಲವತ್ತು ಸಾವಿರವಾಯ್ತು. ಆರು ತಿಂಗಳ ನಂತರವೂ ಕೇಸು ವಿಚಾರಣೆ ಮುಗಿಯದಿದ್ದರೆ ಕೋರ್ಟು ತನಗೆ ಇಷ್ಟ ಬಂದ ಮೊತ್ತವನ್ನ ಅಂದರೆ ನಾಲ್ಕು ಪಟ್ಟಿಗಿಂತ ಹೆಚ್ಚಿನ ಹಣವನ್ನ ಬಾಡಿಗೆ ಎಂದು ತೀರ್ಮಾನಿಸಬಹುದು.
  4. ಮಾಲೀಕ ಅಥವಾ ಬಾಡಿಗೆದಾರ ಮನೆಯನ್ನ ಖಾಲಿ ಮಾಡಲು ಮೂರು ತಿಂಗಳ ನೋಟಿಸ್ ನೀಡಬೇಕಾಗುತ್ತದೆ. ಅಲ್ಲದೆ ಬಾಡಿಗೆ ಸಮಯವನ್ನ ಅಂದರೆ ಎಷ್ಟು ವರ್ಷಕ್ಕೆ ನೊಂದಾವಣಿ ಮಾಡಿಸಬೇಕು ಎನ್ನುವುದನ್ನ ಅವರುಗಳ ನಡುವೆ ತೀರ್ಮಾನಿಸಿಕೊಳ್ಳಬೇಕು, ಬಾಡಿಗೆ ಮೊತ್ತವನ್ನ ಕೂಡ ಅವರುಗಳೇ ನಿರ್ಧರಿಸಬೇಕು. ವರ್ಷದ ನಂತರ ಬಾಡಿಗೆ ಹೆಚ್ಚು ಮಾಡುವ ಒಪ್ಪಂದ ಕೂಡ ನಿಬಂಧನೆಯಲ್ಲಿ ಬರೆದಿರಬೇಕಾಗಿರುತ್ತದೆ. ಪ್ರತಿ ತಿಂಗಳು ತಾನು ಪಡೆದ ಬಾಡಿಗೆಗೆ ಮಾಲೀಕ ರಸೀದಿ ನೀಡಬೇಕಾಗುತ್ತದೆ. ಬ್ಯಾಂಕ್ ವರ್ಗಾವಣೆಯಾಗಿದ್ದ ಪಕ್ಷದಲ್ಲಿ ಇದರ ಅವಶ್ಯಕತೆಯಿಲ್ಲ. ನಿಗದಿತ ಅವಧಿಗೆ ಮುಂಚೆ ಇದನ್ನ ನವೀಕರಿಸಿಕೊಳ್ಳಬೇಕು. ಬಾಡಿಗೆದಾರ ತಾನು ಬಾಡಿಗೆಗೆ ಪಡೆದ ಮನೆಯನ್ನ ಇನ್ನೊಬ್ಬರಿಗೆ ಬಾಡಿಗೆ ಕೊಡುವಂತಿಲ್ಲ, ಹಾಗೊಮ್ಮೆ ಕೊಡುವುದಾದರೆ ಅದಕ್ಕೆ ಮಾಲೀಕನ ಒಪ್ಪಿಗೆಯಿರಬೇಕು ಮತ್ತು ಅದು ರೆಂಟ್ ಅಗ್ರಿಮೆಂಟ್ ನಲ್ಲಿ ನಮೂದಿಸರಬೇಕಾಗುತ್ತದೆ.
  5. ಬಾಡಿಗೆದಾರ ಮನೆಯನ್ನ ಬಿಟ್ಟು ಹೋಗುವ ಸಮಯದಲ್ಲಿ ಮಾಲೀಕ ಖರ್ಚುಗಳನ್ನ ಹಿಡಿದುಕೊಂಡು ಉಳಿದ ಹಣವನ್ನ ನೀಡಬೇಕಾಗುತ್ತದೆ. ಕೆಲವೊಮ್ಮೆ ಎರಡು ತಿಂಗಳ ಮುಂಗಡ ಹಣಕ್ಕಿಂತ ಹೆಚ್ಚಿನ ಖರ್ಚು ಆಗಿದ್ದಲ್ಲಿ ಅದನ್ನ ರೆಂಟ್ ಕೋರ್ಟ್ ನಲ್ಲಿ ಕಾರಣ ಸಮೇತ ನೀಡಿ ಬಾಡಿಗೆದಾರನಿಂದ ವಾಪಸ್ಸು ಪಡೆಯಬಹದು. ಬಾಡಿಗೆ ಕಟ್ಟಡದ ಸಾಮಾನ್ಯ ಜಾಗ ಅಂದರೆ ಎಲ್ಲಾ ಬಾಡಿಗೆದಾರರು ಉಪಯೋಗಿಸುವ ಜಾಗವನ್ನ ಸರಿಯಾಗಿ ಇಟ್ಟು ಕೊಳ್ಳುವುದು ಮನೆಯ ಮಾಲೀಕನ ಜವಾಬ್ದಾರಿ, ಉಳಿದಂತೆ ಮನೆಯ ಒಳಗಡೆ ಬಾಡಿಗೆಗೆ ಬಂದಾಗ ಹೇಗಿತ್ತು ಅದೇ ಸ್ಥಿತಿಯನ್ನ ಕಾಯ್ದು ಕೊಳ್ಳುವುದು ಬಾಡಿಗೆದಾರನ ಜವಾಬ್ದಾರಿ. ಮನೆಯ ಒಳಗಡೆ ಬರುವ ಸಣ್ಣ ಪುಟ್ಟ ರಿಪೇರಿಗಳು ಕೂಡ ಅವನಿಗೆ ಸೇರಿದ್ದು. ಕಟ್ಟಡದಲ್ಲಿ ವಾಸಿಸಲು ಯೋಗ್ಯವಲ್ಲದ ಪರಿಸ್ಥಿತಿ ಉಂಟಾದರೆ ಆಗ ಅದನ್ನ ಸರಿ ಮಾಡಿಸುವುದು ಮಾಲೀಕನ ಕೆಲಸ.
  6. ಮನೆಯ ಮಾಲೀಕ ಮನೆಯನ್ನ ಮಾರಲು ಬಯಸಿದಾಗ, ಅಥವಾ ಕಟ್ಟಡದ ರಿಪೇರಿ ಇತ್ಯಾದಿ ಕಾರಣಗಳಿಗೆ ಬಾಡಿಗೆದಾರರನ್ನ ಬದಲಾಯಿಸಲು ಬಯಸಿದಲ್ಲಿ ಇದನ್ನ 15 ದಿನದ ನೋಟಿಸ್ ಮೂಲಕ ಮಾಡಿಕೊಳ್ಳಬಹುದು.
  7. ಮನೆಯ ಮಾಲೀಕನ ಮರಣವಾದರೆ, ಆತನ ಮಕ್ಕಳು ಇರುವ ಬಾಡಿಗೆದಾರನನ್ನ ಬಿಡಿಸಲು ಬಯಸಿದರೆ ಆಗ ಕೂಡ 15 ದಿನದಲ್ಲಿ ಬಾಡಿಗೆದಾರ ಮನೆಯನ್ನ ಖಾಲಿ ಮಾಡಬೇಕಾಗುತ್ತದೆ.
  8. ಬಾಡಿಗೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಮಾಲೀಕ ಬಾಡಿಗೆದಾರನಿಗೆ ಮೂಲಭೂತ ಅವಶ್ಯಕತೆಯಾದ ನೀರು, ವಿದ್ಯುತ್, ಪಾರ್ಕಿಂಗ್, ಲಿಫ್ಟ್, ಜಿಮ್ ಇತ್ಯಾದಿ ಸೌಲಭ್ಯವನ್ನ ಕಡಿತಗೊಳಿಸುವಂತಿಲ್ಲ, ಹಾಗೊಮ್ಮೆ ಕಡಿತಗೊಳಿಸಿದರೆ ಮಾಲೀಕ ಎರಡು ತಿಂಗಳ ಬಾಡಿಗೆಯನ್ನ ಪರಿಹಾರವಾಗಿ ನೀಡಬೇಕಾಗುತ್ತದೆ.
  9. ಬಾಡಿಗೆದಾರ ಮನೆಯನ್ನ ಖಾಲಿ ಮಾಡಿದಾಗ ಖರ್ಚು ಕಳೆದು ಉಳಿದ ಹಣವನ್ನ ವಾಪಾಸ್ಸು ಮಾಡಬೇಕು. ಹಾಗೊಮ್ಮೆ ವಾಪಸ್ಸು ಮಾಡದೆ ಹೋದರೆ ಕೋರ್ಟ್ ಆದೇಶದಂತೆ ಬಡ್ಡಿ ಸಮೇತ ಹಣವನ್ನ ವಾಪಸ್ಸು ಮಾಡಬೇಕಾಗುತ್ತದೆ. ಬಾಡಿಗೆದಾರನ ಮನೆಯನ್ನ ಹೊಕ್ಕು ಪರಿಶೀಲನೆ ನಡೆಸಲು 24 ಗಂಟೆಗಳ ಮೊದಲು ನೋಟೀಸ್ ನೀಡಬೇಕಾಗುತ್ತದೆ. ಸೂರ್ಯ ಹುಟ್ಟುವ ಮುಂಚೆ ಮತ್ತು ಸೂರ್ಯ ಮುಳುಗಿದ ನಂತರ ಮನೆಯನ್ನ ಪ್ರವೇಶಿಸುವಂತಿಲ್ಲ. ಬಾಡಿಗೆ ಹಣದಲ್ಲಿ ಜಗಳವಾದಲ್ಲಿ ಮತ್ತು ಮಾಲೀಕ ಹಣವನ್ನ ತೆಗೆದುಕೊಳ್ಳಲು ಒಪ್ಪದ ಸಮಯದಲ್ಲಿ ಬಾಡಿಗೆದಾರ ಹಣವನ್ನ ರೆಂಟ್ ಅಥಾರಿಟಿಯಲ್ಲಿ ಡೆಪಾಸಿಟ್ ಮಾಡಬಹುದು.

Leave A Reply

Your email address will not be published.