ಫೇಸ್ಬುಕ್ ಗೆಳೆಯನಿಂದ ಮಹಿಳೆಗೆ ವಂಚನೆ | 1.15 ಲಕ್ಷ ರೂ.ವಂಚನೆ
ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಉಡುಗೊರೆಯಾಗಿ ದೊಡ್ಡ ಮೊತ್ತದ ಹಣ ನೀಡುವುದಾಗಿ ಹೇಳಿ ಅವರಿಂದ 1.15 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಮಂಗಳೂರಿನ ಮಹಿಳೆಯೊಬ್ಬರಿಗೆ ಫೇಸ್ಬುಕ್ನಲ್ಲಿ ನೆಲ್ಸನ್ ಮಾರ್ಕ್ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಮಹಿಳೆ ಅಕ್ಸೆಪ್ಟ್ ಮಾಡಿದ್ದರು.
ನಂತರ ಆ ವ್ಯಕ್ತಿ ಮತ್ತು ಮಹಿಳೆಯ ನಡುವೆ ಫೇಸ್ಬುಕ್ ಮುಖಾಂತರ ಸಂದೇಶ ವಿನಿಮಯ ನಡೆಯುತ್ತಿತ್ತು ಎನ್ನಲಾಗಿದೆ. ಬಳಿಕ ನೆಲ್ಸನ್ ಮಾರ್ಕ್ ಮಹಿಳೆಯ ವಾಟ್ಸಪ್ ಮೊಬೈಲ್ ನಂಬರ್ ಪಡೆದು +44751737590 ಸಂಖ್ಯೆಯಿಂದ ಮೆಸೇಜ್ ಕಳುಹಿಸಿ ತಾನು ಉಡುಗೊರೆಯಾಗಿ ದೊಡ್ಡ ಮೊತ್ತದ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡುವುದಾಗಿಯೂ ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಕಳುಹಿಸುವಂತೆ ಸೂಚಿಸಿದ.
ಅದನ್ನು ನಂಬಿದ ಮಹಿಳೆಯು ತನ್ನ ಬ್ಯಾಂಕ್ ಖಾತೆಯ ವಿವರಗಳನ್ನು ಕಳುಹಿಸಿದ್ದರು. ತದನಂತರ ಮಹಿಳೆಯ ಖಾತೆಗೆ ಹಣ ಜಮೆಯಾಗಿದೆ ಎಂದು ತಿಳಿಸಿ ಡೆಪಾಸಿಟ್ ಸ್ಲಿಪ್ನ್ನು ಕಳುಹಿಸಿಕೊಟ್ಟಿದ್ದಾನೆ.
ಆ ಮೊತ್ತವನ್ನು ಪಡೆಯಬೇಕಾದರೆ ಆದಾಯ ತೆರಿಗೆ ಪಾವತಿಸಬೇಕು ಎಂದು ಹೇಳಿದ್ದು, ವಂಚಕನ ಮಾತನ್ನು ನಂಬಿದ ಮಹಿಳೆ ಆತ ಕಳುಹಿಸಿದ್ದ ಇಂಡಿಯನ್ ಬ್ಯಾಂಕ್ ದೆಹಲಿಯ ಖಾತೆ ಸಂಖ್ಯೆ 6997492562ಗೆ ಹಂತ ಹಂತವಾಗಿ 1.15 ಲ.ರೂ.ಗಳನ್ನು ತನ್ನ ಬ್ಯಾಂಕ್ ಖಾತೆ ಯಿಂದ ಪಾವತಿಸಿದ್ದಾರೆ. ಆದರೂ ತನಗೆ ಯಾವುದೇ ಉಡುಗೊರೆಯ ಮೊತ್ತ ನೀಡದೆ ವಂಚಿಸಲಾಗಿದೆ ಎಂದು ಮಹಿಳೆಯು ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ ಜನರು ಅತಿಯಾಸೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ.ಸೈಬರ್ ಕ್ರೈಂ ಹಾಗೂ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಜನತೆ ಮೋಸ ಹೋಗುತ್ತಿದ್ದಾರೆ.ಮೋಸ ಹೋಗುವವರು ಎಲ್ಲಿ ತನಕ ಇರುತ್ತಾರೋ ಅಲ್ಲಿ ತನಕ ಮೋಸ ಮಾಡುವವರೂ ಇರುತ್ತಾರೆ.
ಜನತೆ ಬಹುಮಾನ,ಉಡುಗೊರೆಯ ಆಸೆಯಿಂದ ಲಕ್ಷಾಂತರ ಹಣ ಕಳೆದು ಕೊಳ್ಳುವ ಮುನ್ನ ಯೋಚಿಸಬೇಕು.