ಜನಪ್ರಿಯತೆಯಲ್ಲಿ ಮೋದಿಗೆ ವಿಶ್ವದಲ್ಲೇ ಮೊದಲ ಸ್ಥಾನ | ಜಗತ್ತಿನ ಎಲ್ಲ ನಾಯಕರಿಗಿಂತ ಅತಿ ಹೆಚ್ಚು ಗ್ಲೋಬಲ್ ಅಪ್ರೂವಲ್ ರೇಟಿಂಗ್ ಪಡೆದ ಪ್ರಧಾನಿ ಮೋದಿ
ಕೊರೋನಾ ವೈರಸ್ ತಂದೊಡ್ಡಿದ ಬಗೆಬಗೆಯ ಸಂಕಷ್ಟಗಳು ಹಾಗೂ ಆರ್ಥಿಕ ಕುಸಿತದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.
ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯ ಪ್ರಕಾರ ಮೋದಿಯ ಜಾಗತಿಕ ಅನುಮೋದನೆ ರೇಟಿಂಗ್ ಶೇಕಡಾ 66 ಎಂಬುದನ್ನು ಬಹಿರಂಗಗೊಳಿಸಿದೆ. ಯುಎಸ್, ಯುಕೆ, ರಷ್ಯಾ, ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 13 ದೇಶಗಳ ಇತರ ವಿಶ್ವ ನಾಯಕರಿಗಿಂತ ಉತ್ತಮ ನಾಯಕ ಎಂದು ಈ ಸಮೀಕ್ಷೆ ಹೇಳಿದೆ.
ಈ ಸಂಸ್ಥೆ ಭಾರತದಲ್ಲಿ 2,126 ಯುವಕರ ಜೊತೆ ಆನ್ಲೈನ್ ಮೂಲಕ ಸಮೀಕ್ಷೆ ಸಂದರ್ಶನವನ್ನು ನಡೆಸಿತ್ತು. ಈ ವರ್ಷದ ಮೇ ತಿಂಗಳಲ್ಲಿ ಶೇ.84 ರಷ್ಟಿದ್ದ ಪ್ರಧಾನಿ ಮೋದಿಯ ಅನುಮೋದನೆ ಪ್ರಮಾಣ ಶೇ. 66ಕ್ಕೆ ಇಳಿದಿದೆ. ಶೇ. 18ರಷ್ಟು ಇದು ಇಳಿಕೆ ಕಂಡಿದೆ ಎಂದು ಮಾರ್ನಿಂಗ್ ಕನ್ಸಲ್ಟ್ ತನ್ನ ಸಮೀಕ್ಷೆಯಲ್ಲಿ ಉಲ್ಲೇಖಿಸಿದೆ.
ಮೋದಿಯ ಅನುಮೋದನೆ ಪ್ರಮಾಣ ಇಳಿದರೂ, ವಿಶ್ವದಲ್ಲಿ ಅವರೇ ನಂಬರ್ ಒನ್ ಆಗಿ ಹೊರಹೊಮ್ಮಿದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮುಂತಾದವರನ್ನು ಹಿಂದಿಕ್ಕಿ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಎರಡನೇ ಸ್ಥಾನವನ್ನು ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ (65%) ಪಡೆದರೆ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (63%), ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (54%), ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ (53%), ಅಮೆರಿಕ ಅಧ್ಯಕ್ಷ ಜೋ ಬಿಡೆನ್ (53%), ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (48%), ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (44%), ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ (37%), ಸ್ಪ್ಯಾನಿಷ್ ಸ್ಪೇನ್ ಪೆಡ್ರೊ ಸ್ಯಾಂಚೆ ಝೆ(36%), ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ (35%), ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (35%) ಮತ್ತು ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ (29%) ಪಡೆದಿದ್ದಾರೆ.
ಕೊರೋನಾ ಎರಡನೇ ಅಲೆ ನಿರ್ವಹಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮುನ್ನೆಚ್ಚರಿಕಾ ಕ್ರಮಗಳು ವಿಶ್ವದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದವು. ಸಾವಿನ ಸಂಖ್ಯೆಯಲ್ಲಿ ಸರಿಯಾದ ಲೆಕ್ಕ ನೀಡುತ್ತಿಲ್ಲ ಎನ್ನುವ ಆಪಾದನೆಯೂ ಕೇಂದ್ರ ಸರಕಾರದ ಮೇಲಿತ್ತು.
ಲಸಿಕೆ ಅಭಿಯಾನದಲ್ಲಿ ಅವ್ಯವಸ್ಥೆ, ಎರಡನೇ ಅಲೆಯ ಹಾವಳಿ ಆರಂಭವಾಗಿದ್ದರೂ ಕುಂಭ ಮೇಳಕ್ಕೆ ಅನುಮತಿ ನೀಡಿದ್ದು, ಪಂಚ ರಾಜ್ಯಗಳ ಚುನಾವಣೆಯಲ್ಲಿ ಲಕ್ಷಲಕ್ಷ ಜನರನ್ನು ಸೇರಿಸಿ ಚುನಾವಣಾ ಪ್ರಚಾರ ನಡೆಸಿದ್ದು ಟೀಕೆಗೆ ಗುರಿಯಾಗಿತ್ತು.
ಇದು ಕೇವಲ ಭಾರತದ ಸಮಸ್ಯೆಯಲ್ಲ, ವಿಶ್ವದ ಹಲವು ರಾಷ್ಟ್ರಗಳ ನಾಯಕರು ಕೊರೋನಾ ನಿರ್ವಹಣೆಯಲ್ಲಿ ಕೆಟ್ಟ ಹೆಸರನ್ನು ಅಂಟಿಸಿಕೊಂಡಿದ್ದರು. ಎಲ್ಲಾ ನಾಯಕರಿಗೆ ಹೋಲಿಸಿದರೆ ಮೋದಿಯೇ ಕೊರೋನಾ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದಕ್ಕೆ ಈ ಸಮೀಕ್ಷೆಯು ಪುಷ್ಠಿ ನೀಡುತ್ತದೆ.
ಕೊರೋನಾ ಎರಡನೇ ಅಲೆ ಆರಂಭಕ್ಕೆ ಮುನ್ನ ಪ್ರಧಾನಿ ಮೋದಿ ವಿಶ್ವದಲ್ಲೇ ಜನಪ್ರಿಯ ವ್ಯಕ್ತಿಯಾಗಿದ್ದರು, ಈಗಲೂ ಕೂಡ ಅವರೇ ಮುಂದುವರೆದಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ.