ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದಿಂದ ಬಾಳಿಗೊಂದು ಆಸರೆ ಮನೆ ಹಸ್ತಾಂತರ

ಕಾಣಿಯೂರು : ಯುವಕರು ಮನಸ್ಸು ಮಾಡಿದರೆ ಇಡೀ ಸಮಾಜವನ್ನು ನಿರ್ಮಾಣ ಮಾಡಬಲ್ಲರು, ಮನುಷ್ಯನ ಕಷ್ಟಕ್ಕೆ ಕೈ ಜೋಡಿಸಬಲ್ಲರು ಎಂಬುದಕ್ಕೆ ಕಾಣಿಯೂರಿನ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಸಾಕ್ಷಿಯಾಗಿದೆ. ಸೇವಾ ಪ್ರತಿಫಲ ಬಯಸದೇ ಸಾಮಾಜಿಕ ಸೇವಾ ಕಳಕಳಿಯನ್ನು ಹೊಂದಿರುವ ಅದೆಷ್ಟೋ ಅನನ್ಯ ಉತ್ಸಾಹಿ ಯುವ ತರುಣ ಸಂಘಟನೆಗಳಿವೆ.

 

ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಎಲುವೆ ಬೊಮ್ಮಿ ಎಂಬವರು ತಮ್ಮ ಜೀವನ ನಿರ್ವಹಣೆಗೆ ಕೂಲಿ ಮಾಡಿ ತನ್ನ ದಣಿವನ್ನು ಆರಿಸಿಕೊಳ್ಳಲು ಜೋಪಡಿ ಸೇರಿಕೊಳ್ಳೋಣವೆಂದರೆ ಮೂಲ ಸೌಕರ್ಯಗಳೇ ಇಲ್ಲದ ಮನೆ ಇವತ್ತೋ.. ನಾಳೆಯೂ ಬೀಳುವ ಮನೆಯ ಮುಂಬಾಗಿಲು. ಈ ಮನೆಯ ಪರಿಸ್ಥಿತಿಯನ್ನು ಅವಲೋಕಿಸಿದ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲವು ಕಾಣಿಯೂರಿನ ವಿವಿಧ ಸಂಘ ಸಂಸ್ಥೆಗಳ, ಊರವರ, ದಾನಿಗಳ ಸಹಕಾರದೊಂದಿಗೆ ಕಡುಬಡತನದ ಕತ್ತಲೆಯ ಕೋಣೆಯಲ್ಲಿದ್ದ ಮನೆಯನ್ನು ದುರಸ್ತಿ ಮಾಡಿ ಬೆಳಕಿನಡೆಗೆ ಕೊಂಡು ಹೋಗುವಲ್ಲಿ ಆಶಾಕಿರಣವಾಗಿದೆ. ಮನೆ ದುರಸ್ಥಿ ಮಾಡಿರುವ ತಂಡದ ಸದಸ್ಯರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಕಾಣಿಯೂರು ಗ್ರಾಮದ ಎಲುವೆ ಎಂಬಲ್ಲಿ ವಾಸವಿರುವ ಬೊಮ್ಮಿ ಎಂಬವರ ಮನೆಯ ಗೋಡೆ ಕುಸಿತಗೊಂಡು ಬೀಳುವ ಸ್ಥಿತಿಯಲ್ಲಿದ್ದ ಕಾರಣ ಬಡಕುಟುಂಬದ ನೆರವಿಗೆ ಧಾವಿಸಿದ ಕಾಣಿಯೂರು
ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲವು ಸದಸ್ಯರೊಂದಿಗೆ,ಊರಿನ ಉತ್ಸಾಹಿ ಯುವಕರನ್ನು ಸೇರಿಸಿ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಸದಾ ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದೆ. ಕಳೆದ ಒಂದು ತಿಂಗಳಿನಿಂದ ಅವಿರತವಾಗಿ ಶ್ರಮದಾನದ ಮೂಲಕ ದುಡಿದು ಬೊಮ್ಮಿ ಮತ್ತು ಸೀತಾರಾಮ-ಕಾವೇರಿ ಬಡಕುಟುಂಬಕ್ಕೆ ನೂತನ‌ ಮನೆಯನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಮನೆಯ ನಿರ್ಮಾಣಕ್ಕೆ ಕಾಣಿಯೂರು ಗ್ರಾಮ ಪಂಚಾಯತ್, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಹಾಲು ಉತ್ಪಾದಕರ ಸಂಘ ಕಾಣಿಯೂರು,ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕೂಡುರಸ್ತೆ, ಸ್ನೇಹಿತರ ಬಳಗ ಕಲ್ಪಡ, ಅಲ್ಲದೇ ಊರಿನ ಹಲವಾರು ದಾನಿಗಳು ಹಣಕಾಸಿನ ನೆರವನ್ನು ನೀಡಿರುತ್ತಾರೆ. ಯುವಕ ಮಂಡಲದ ಸದಸ್ಯರು ಧನಸಹಾಯದೊಂದಿಗೆ ಮನೆನಿರ್ಮಾಣ ಕೆಲಸದಲ್ಲಿ ಶ್ರಮವಹಿಸಿ ಸುಂದರ ಮನೆ ನಿರ್ಮಾಣ ಆಗುವಲ್ಲಿ ಸಹಕರಿಸಿದ್ದಾರೆ.

ಬೆಳ್ಳಿ ಹಬ್ಬದ ಸವಿನೆನಪಿಗೆ ಬೊಳ್ಳಿ ಬೊಲ್ಪು ಮನೆ

ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲವು ಸ್ಥಾಪನೆಗೊಂಡು 25 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಬೆಳ್ಳಿಹಬ್ಬದ ಸವಿನೆನಪಿಗಾಗಿ ವಿವಿಧ ಸಂಘ ಸಂಸ್ಥೆಗಳ, ಊರವರ, ದಾನಿಗಳ ನೆರವಿನೊಂದಿಗೆ ಬಡಕುಟುಂಬದ ಬಾಳಿಗೊಂದು ಆಸರೆ “ಬೊಳ್ಳಿ ಬೊಲ್ಪು” ನೂತನ ಮನೆಯ ಹಸ್ತಾಂತರ, ಗೃಹಪ್ರವೇಶವು ಜೂ 18ರಂದು ನಡೆಯಿತು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸ್,ಉಪಾಧ್ಯಕ್ಷ ಗಣೇಶ್ ಉದನಡ್ಕ,ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ,ಅಧ್ಯಕ್ಷ ವಾಸುದೇವ ನಾಯ್ಕ್ ತೋಟ,ಉಪಾಧ್ಯಕ್ಷ ವಿಶ್ವನಾಥ ಓಡಬಾಯಿ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು,ಗೆಳೆಯರ ಬಳಗ ಕಲ್ಪಡದ ಅಧ್ಯಕ್ಷ ಗಣೇಶ್ ಕಲ್ಪಡ,ಫ್ರೆಂಡ್ಸ್‌ ಸ್ಪೋರ್ಟ್ಸ್ ಕ್ಲಬ್ ಕೂಡುರಸ್ತೆಯ ಪ್ರಗತ್ ರಾಜ್ ಬೈತಡ್ಕ,ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಕಾರ್ಯದರ್ಶಿ ವಿನಯ್ ಎಲುವೆ, ಗೋಪಾಲಕೃಷ್ಣ ಎಲುವೆ,ರಾಧಾಕೃಷ್ಣ ಗೌಡ ಕಂಪ, ವಿನಯ್ ಕೇರ್ಪಡ ಮತ್ತಿತರರು ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಸ್ವಾಗತಿಸಿ, ಜಯಂತ ಅಬೀರ ವಂದಿಸಿದರು. ಪರಮೇಶ್ವರ ಅನಿಲ ಕಾರ್ಯಕ್ರಮ ನಿರೂಪಿಸಿದರು.

ಯುವಕ ಮಂಡಲದ ಸ್ಥಾಪನೆಯಾಗಿ 25 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಆ ಸವಿನೆನಪಿಗಾಗಿ ಬಡಕುಟುಂಬದ ಬಾಳಿಗೊಂದು ಆಸರೆಯಾಗಿ ನಿರ್ಮಾಣಗೊಂಡ “ಬೊಳ್ಳಿ ಬೊಲ್ಪು” ನೂತನ ಮನೆಯ ಹಸ್ತಾಂತರ, ಗೃಹಪ್ರವೇಶ ಕಾರ್ಯಕ್ರಮ ಕೋವಿಡ್ ನಿಯಮಾವಳಿಯಂತೆ ಅತ್ಯಂತ ಸರಳವಾಗಿ ನಡೆದಿದೆ.
– ಸುರೇಶ್ ಓಡಬಾಯಿ ಅಧ್ಯಕ್ಷರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು

Leave A Reply

Your email address will not be published.