ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡ ಪಾಪಣ್ಣ?!!

ಕುಡಿಯಲು ಮದ್ಯ ಸಿಗಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

 

ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಪಾಪಣ್ಣ (45) ಇಂತಹ ಘೋರ ಕೃತ್ಯಕ್ಕೆ ಮುಂದಾದ ಆಸಾಮಿ.

ಮದುವೆ ಸಮಾರಂಭಗಳಲ್ಲಿ ವಾಲಗ ವಾದ್ಯ ನುಡಿಸುವ ಕಾಯಕ ಮಾಡುತ್ತಿದ್ದ ಪಾಪಣ್ಣ ಲಾಕ್ ಡೌನ್ ನಿಂದ ಸಮಾರಂಭಗಳು ನಡೆಯದೆ ಖಿನ್ನತೆಗೆ ಒಳಗಾಗಿದ್ದ. ಹಾಗೆಯೇ ಹಲವು ವರ್ಷಗಳಿಂದ ಈತ ಮದ್ಯ ವ್ಯಸನಿಯೂ ಆಗಿದ್ದ. ಲಾಕ್ ಡೌನ್ ವೇಳೆ ಮದ್ಯ ಸಿಗದಿದ್ದರಿಂದ ಮದ್ಯ ತಂದುಕೊಡುವಂತೆ ಮನೆಯವರೊಂದಿಗೆ ಪ್ರತಿದಿನ ಜಗಳವಾಡುತ್ತಿದ್ದ.

ನಿನ್ನೆ ರಾತ್ರಿ ಮನೆಯಲ್ಲಿದ್ದ ಪಾಪಣ್ಣ ಮದ್ಯ ಸಿಗದ ಕಾರಣಕ್ಕೆ ಕೋಪದಿಂದ ತನ್ನ ಕಾಲಿಗೆ ತಾನೇ ಮಚ್ಚಿನಿಂದ ಬೀಸಿಕೊಂಡಿದ್ದಾನೆ. ಮಚ್ಚು ಬೀಸಿದ ರಭಸಕ್ಕೆ ಬಲಗಾಲು ತುಂಡಾಗಿ ನೆಲದ ಮೇಲೆ ಬಿದ್ದಿದೆ.

ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಪಾಪಣ್ಣನನ್ನು ಸ್ಥಳೀಯರು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.