ದಕ್ಷಿಣ ಕನ್ನಡ ಕೊರೊನಾ ರಣಕೇಕೆ | ಒಂದೇ ದಿನ 1006 ಮಂದಿಗೆ ಪಾಸಿಟಿವ್,15 ಮಂದಿ ಸಾವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾದಿಂದಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದು ದಿನದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

 

ಜೂ.18ರ ಶುಕ್ರವಾರದಂದು 665 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 1024 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದಂದು ಶೇ.10.07 ಪಾಸಿಟಿವಿಟಿ ದರ ದಾಖಲಾಗಿದೆ.

23 ಕಡೆ ಕಂಟೈನ್‌ಮೆಂಟ್‌ ವಲಯ
ದಕ್ಷಿಣ ಕನ್ನಡ ಜಿಲ್ಲೆಯ 23 ಕಡೆಗಳಲ್ಲಿ ಶುಕ್ರವಾರ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.

ಮಂಗಳೂರಿನ 7, ಬೆಳ್ತಂಗಡಿ ತಾಲೂಕಿನ 8, ಪುತ್ತೂರು ಸುಳ್ಯ ತಾಲೂಕಿನಲ್ಲಿ ತಲಾ 2, ಬಂಟ್ವಾಳ ತಾಲೂಕಿನ 4 ಕಡೆಗಳಲ್ಲಿ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.

ಸರಾಸರಿ 10 ಸಾವಿರ ಪರೀಕ್ಷೆ
ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತಪಾಸಣಾ ಪರೀಕ್ಷೆ ಏರಿಕೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ ಕೆಲ ದಿನದಿಂದ ಪ್ರತೀ ದಿನ ಸರಾಸರಿ 10,000 ಮಂದಿಯ ತಪಾಸಣೆ ಮಾಡಲಾಗುತ್ತಿದೆ. ಶುಕ್ರವಾರದಂದು ಒಟ್ಟು 9984 ಮಂದಿಯ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಅಪಾರ್ಟ್‌ಮೆಂಟ್‌ ವಾಸಿಗಳು ಕೊರೊನಾ ಪಾಸಿಟಿವ್‌ಗೆ ಒಳಗಾಗದಂತೆ ದ.ಕ. ಜಿಲ್ಲಾಡಳಿತ ಹೆಚ್ಚಿನ ನಿಗಾ ಇರಿಸಿದೆ.

ಈ ಕಾರಣಕ್ಕೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ರಿಂಗ್‌ ಸರ್ವೆಲೆನ್ಸ್‌ಗೆ ಆದ್ಯತೆ ನೀಡಲಾಗಿದೆ. ವಸತಿ ಸಮುಚ್ಚಯಗಳಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬಂದ ವ್ಯಕ್ತಿ ವಾಸಿಸುವ ಮಹಡಿ, ಮೇಲಿನ ಮಹಡಿ ಹಾಗೂ ಕೆಳಗಿನ ಮಹಡಿಗಳಲ್ಲಿ ವಾಸವಿರುವ ವ್ಯಕ್ತಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಕೋವಿಡ್‌ ಪ್ರಕರಣ ಕಂಡು ಬಂದ ಮನೆಯ ಸುತ್ತಲಿನ ಪ್ರದೇಶದ 50 ಮನೆಗಳ ಸದಸ್ಯರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

ಕೊರೊನಾ ದೈನಂದಿನ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ನಗರದ ಬಳಿಕ ದ.ಕ. ಜಿಲ್ಲೆಯಲ್ಲೇ ಅತ್ಯಧಿಕ ಕೊರೊನಾ ಪ್ರರಕಣ ದಾಖಲಾಗುತ್ತಿದೆ. ಶುಕ್ರವಾರದಂದು ಬೆಂಗಳೂರು ನಗರದಲ್ಲಿ 1100 ದೈನಂದಿನ ಪ್ರಕರಣ ದಾಖಲಾಗಿ 39 ಮಂದಿ ಸಾವನ್ನಪ್ಪಿದ್ದಾರೆ. ಬಳಿಕ ದ.ಕ. ಜಿಲ್ಲೆಯಲ್ಲಿ 1006 ಮಂದಿಗೆ ಕೊರೊನಾ ದಾಖಲಾಗಿ 15 ಮಂದಿ ಸಾವನ್ನಪ್ಪಿದ್ದಾರೆ.

Leave A Reply

Your email address will not be published.