ಮೊಲಕ್ಕೆ ಸಿಡಿಸಿದ ಗುಂಡು ಜತೆಗಾರನಿಗೆ ತಾಗಿ ವ್ಯಕ್ತಿ ಸಾವು | ಜತೆಗಾರನ ಸಾವಿಗೆ ಕಾರಣನಾದ ವ್ಯಕ್ತಿ ಪರಾರಿ

ವ್ಯಕ್ತಿಯೋರ್ವ ಮೊಲದ ಬೇಟೆಗಾಗಿ ಹಾರಿಸಿದ ಗುಂಡು ತನ್ನ ಸ್ನೇಹಿತನಿಗೆ ತಗಲಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಜರುಗಿದೆ.

 

ಕೇರಳದ ಸುಲ್ತಾನ್ ಬತ್ತೇರಿ ಪಡಿಚರ ಗ್ರಾಮದ ಎಂ.ಎಸ್.ಪ್ರಸನ್ನ ಅಲಿಯಾಸ್ ಮೋಹನ್ (58) ಎಂಬವರು ತನ್ನ ಸ್ನೇಹಿತ ಹಾರಿಸಿದ ಗುಂಡಿಗೆ ಬಲಿಯಾದ ವ್ಯಕ್ತಿ.

ಪ್ರಸನ್ನ ಅಲಿಯಾಸ್ ಮೋಹನ್ ಮೂಲತಃ ಕೇರಳದವರಾಗಿದ್ದು, ಇವರು ಕುರಿಹುಂಡಿ ಗ್ರಾಮದಲ್ಲಿ ಗುತ್ತಿಗೆ ಪಡೆದಿದ್ದ ಶುಂಠಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

ತನ್ನ ಸ್ನೇಹಿತ ತಾಲೂಕಿನ ಕುತ್ತುವಾಡಿ ಗ್ರಾಮದ ನಿಶಾದ್ ಎಂಬಾತನ ಮನೆಗೆ ಊಟಕ್ಕಾಗಿ ರಾತ್ರಿ ಸುಮಾರು 8:30ಕ್ಕೆ ತೆರಳಿದ್ದಾರೆ. ಅದೇ ವೇಳೆ ನಿಶಾದ್ ಕಾಡು ಮೊಲದ ಬೇಟೆಯಾಡಲು ನಾಡ ಬಂದೂಕಿನೊಂದಿಗೆ ಪಕ್ಕದ ಜಮೀನಿಗೆ ತೆರಳಿದ್ದಾನೆ.

ಬಳಿಕ ಪ್ರಸನ್ನ ಕೂಡಾ ಕಾಡಿನತ್ತ ಹೊರಟಿದ್ದು, ಈ ಸಂದರ್ಭ ಮೊಲವೆಂದು ಭಾವಿಸಿ ಪ್ರಸನ್ನ ಅವರಿಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಪ್ರಸನ್ನ ಅವರನ್ನು ನಗರದ ಕೆ.ಆರ್.ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರಸನ್ನ ಸಾವಿಗೀಡಾಗಿದ್ದಾರೆ.

ಈ ಸಂಬಂಧ ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಶಾದ್ ಪರಾರಿಯಾಗಿದ್ದಾನೆ.

Leave A Reply

Your email address will not be published.