ಶಾಲಾ ಶೈಕ್ಷಣಿಕ ವರ್ಷ ಆರಂಭಕ್ಕೆಂದು ಜೂ.15 ರಿಂದ ಶಿಕ್ಷಕರಿಗೆ ಶಾಲೆಗೆ ಆಗಮಿಸುವಂತೆ ಹೊರಡಿಸಿದ್ದ ಆದೇಶ ತಿದ್ದುಪಡಿ | ಶಿಕ್ಷಕಿಯರಿಗೆ ವಿನಾಯಿತಿ
ಬೆಂಗಳೂರು: ಶಾಲಾ ಶೈಕ್ಷಣಿಕ ವರ್ಷ ಆರಂಭಕ್ಕೆಂದು ಇಂದಿನಿಂದ (ಜೂ.15) ಶಿಕ್ಷಕರಿಗೆ ಶಾಲೆಗೆ ಆಗಮಿಸುವಂತೆ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ.
ಹೊಸ ಆದೇಶದಲ್ಲಿ ಲಾಕ್ ಡೌನ್ ಇರುವ ಹಾಗೂ ಅನ್ ಲಾಕ್ ಆದ ಜಿಲ್ಲೆಗಳಲ್ಲಿ ಸಾರಿಗೆ ಆರಂಭವಾಗದ ಕಾರಣ ಮಹಿಳಾ ಶಿಕ್ಷಕಿಯರಿಗೆ ಜೂ.21ರ ವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಲಾಗಿದೆ.
ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶವನ್ನು ತಿದ್ದುಪಡಿ ಮಾಡಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಜೂನ್.21ರಿಂದ ಲಾಕ್ ಡೌನ್ ಸಡಿಲಗೊಂಡು ಬಸ್ ಸಂಚಾರ ಆರಂಭವಾಗುವ ಸಾಧ್ಯತೆಗಳಿರುವುದರಿಂದ ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನು ಹೊರತುಪಡಿಸಿ, ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿಯರು ಜೂ.21ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ತಿದ್ದುಪಡಿ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.