ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಟ್ವಿಟರ್ ಅಭಿಯಾನ

ಭಾಷಾಪ್ರೇಮ ಎನ್ನುವುದಕ್ಕೆ ಅನ್ವರ್ಥಕನಾಮ ತುಳುವರು. ಅದು ಮತ್ತೊಮ್ಮೆ ಸಾಬೀತಾಗಿದೆ. ತುಳುವನ್ನು ಅಧಿಕೃತ ಭಾಷೆ ಮಾಡಬೇಕೆಂದು ಕೈಗೊಂಡಿದ್ದ ಟ್ವಿಟರ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರಕಿದೆ. 4 ಲಕ್ಷಕ್ಕೂ ಅಧಿಕ ಟ್ವೀಟುಗಳು ತುಳು ಭಾಷಾ ಪ್ರೇಮವನ್ನು ಪ್ರತಿಧ್ವನಿಸಿವೆ.

ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ಸರಕಾರ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಜೈ ತುಳುನಾಡು ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರಿಂದ ಆದಿತ್ಯವಾರದಂದು ಟ್ವಿಟರ್ ಅಭಿಯಾನ ಆರಂಭಗೊಂಡಿದೆ.

ಆದಿತ್ಯವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಯೋಜಿಸಲಾದ ಟ್ವೀಟ್ ಅಭಿಯಾನಕ್ಕೆ ಲಕ್ಷಾಂತರ ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್‌ ಅಭಿಯಾನ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೆ, ತುಳು ಸಾಹಿತ್ಯ ಅಕಾಡೆಮಿ, ಜನಪ್ರತಿನಿಧಿಗಳು ಗಣ್ಯರು ಕೂಡ ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಆದರೆ ಸರಕಾರ ಮಾತ್ರ ಈ ‌ಬಗ್ಗೆ ಮನಸ್ಸು ಮಾಡಿಲ್ಲ.

ಟ್ವೀಟ್ ಅಭಿಯಾನದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ.

Leave A Reply

Your email address will not be published.