ಕೋಡಿಂಬಾಳ : ಕಡಬ ಹಿಂ.ಜಾ.ವೇ. ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ಹಸ್ತಾಂತರ | ಬಡ ಕುಟುಂಬದ 8 ವರ್ಷಗಳ ಜೋಪಡಿ ವಾಸಕ್ಕೆ ಮುಕ್ತಿ

ಕಡಬ:ಕಳೆದ ಎಂಟು ವರ್ಷಗಳಿಂದ ಟರ್ಪಾಲ್ ಕಟ್ಟಿದ ಜೋಪಡಿಯಲ್ಲಿ ನರಕಸದೃಶವಾಗಿ ಜೀವನ ಮಾಡುತ್ತಿದ್ದ ಕೋಡಿಂಬಾಳದ ಯಶವಂತ-ಬಾಲಕಿ ದಂಪತಿಯ ಜೀವನದಲ್ಲಿ ಸಂತಸದ ದಿನಬಂದಿದೆ.

ಯಾಕೆಂದರೆ ಅವರ ಜೋಪಡಿಯ ಬದುಕನ್ನು ಕಂಡ ಸ್ಥಳೀಯ ಸಹೃದಯಿ ಯುವಕರ ತಂಡವೊಂದು ಸಂಘಟನೆ, ದಾನಿಗಳು ಮತ್ತು ಕಡಬ ಠಾಣಾ ಎಸ್.ಐ. ಅವರ ಸಹಕಾರದಲ್ಲಿ ಅಚ್ಚುಕಟ್ಟಾದ ಮನೆಯೊಂದನ್ನು ನಿರ್ಮಿಸಿ, ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯ ನಡೆಸಿ ಜೂ.12ರಂದು ದಂಪತಿಗೆ ಹಸ್ತಾಂತರಿಸಿದೆ.

ಕೋಡಿಂಬಾಳ ಗ್ರಾಮದ ಬೊಲ್ಲೆಕುಕ್ಕು ಎಂಬಲ್ಲಿ, ಮೂಲತ: ನಿಂತಿಕಲ್ಲು ಭಾಗದವರಾಗಿರುವ ಯಶವಂತ ಅವರು ಇಲ್ಲಿಯ ಬಾಲಕಿ ಅವರನ್ನು ಮದುವೆಯಾಗಿ ಮನೆ ಅಳಿಯನಾಗಿದ್ದರು, ಬಳಿಕ ಅವರಿಗೆ ದೊರಕಿದ ಸ್ವಲ್ಪ ಜಾಗದಲ್ಲಿ ಬಂದು ನೆಲೆಸಿದರು. ಅಂದು ತಾತ್ಕಾಲಿಕವಾಗಿ ನಿರ್ಮಿಸಿದ ಟರ್ಪಾಲ್ ಅಡಿಯಲ್ಲಿ ಇಂದಿನವರೆಗೆ ವಾಸ ಮಾಡುತ್ತಿದ್ದಾರೆ, ಯಶವಂತ ಅವರು ಕೂಲಿ ಕೆಲಸ ಮಾಡುತ್ತಿದ್ದು ಅವರು ಮರದಿಂದ ಬಿದ್ದ ಕಾರಣದಿಂದ ಅನಾರೋಗ್ಯ ಪೀಡಿತರಾಗಿ ಮತ್ತೆ ಕೆಲಸ ನಿರ್ವಹಿಸಲು ಆಗದ ಸ್ಥಿತಿಯಲ್ಲಿರುವುದು ಒಂದೆಡೆಯಾದರೆ, ಇತ್ತ ಈ ದಂಪತಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಾಗದಿರುವುದು ಇನ್ನೊಂದು ಸಮಸ್ಯೆ. ಈ ಮಧ್ಯೆ ಜೋಪಡಿಯ ಪಕ್ಕದಲ್ಲಿ ದನ ಹಾಗೂ ಆಡುಗಳನ್ನು ಕಟ್ಟಿ ಸಾಕುತ್ತಿರುವ ಇವರ ಪರಿಸ್ಥಿತಿಯನ್ನು ನೋಡಿದರೆ ಎಂತವರ ಮನ ಕಲಕದಿರದು.

ಈ ದಂಪತಿಗಳ ಈ ಸ್ಥಿತಿಯನ್ನು ಕಂಡ ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿ ಇದೀಗ ಸಂಘಟನೆಯ ಜತೆ ತಟಸ್ಥಗೊಂಡಿರುವ ದಿ. ಹರೀಶ್ ಮಜ್ಜಾರು ಗೆಳೆಯರ ಬಳಗದ ಪುರಂದರ, ಪ್ರಶಾಂತ್, ವಿನೋದ್, ವಿಜಿತ್, ದಿನೇಶ್, ಪ್ರಸಾದ್, ಭಾಸ್ಕರ, ಹರೀಶ್ ನಾಕೂರು ಯುವಕರ ತಂಡವು ಇವರಿಗೊಂದು ಸೂರು ನಿರ್ಮಿಸಿಕೊಡುವ ಯೋಜನೆಗೆ ಕೈ ಹಾಕಿದಾಗ ಇವರಿಗೆ ಕಡಬ ಹಿಂದು ಜಾಗರಣೆ ವೇದಿಕೆಯ ಮಾರ್ಗದರ್ಶನವೂ ದೊರೆಯಿತು.

ಕಡಬ ಎಸ್.ಐ. ರುಕ್ಮ ನಾಯ್ಕ್ ಅವರ ಪ್ರೇರೇಪಣೆಯೂ ಮತ್ತು ಸಹಕಾರ ದೊರೆಯಿತು.

ದಾನಿಗಳಾದ ಪುತ್ತು ಮೇಸ್ತ್ರಿ, ನಾಗೇಶ್ ಇಂಜಿನಿಯರ್, ರಾಧಾಕೃಷ್ಣ ಭಾಗ್ಯಲಕ್ಷ್ಮೀ,ಪೊಲೀಸ್ ಇಲಾಖೆಯ ಭವಿತ್ ರೈ ಪಾಲ್ತಾಡಿ ಇವರುಗಳ ಸಹಕಾರದಿಂದ ಕಡಬ ಹಿಂ.ಜಾ.ವೇ.ಯ ನೇತೃತ್ವದಲ್ಲಿ ಯುವಕರು ಹಗಲು ರಾತ್ರಿ ದುಡಿದು ಒಂದೇ ವಾರದಲ್ಲಿ ಅಚ್ಚುಕಟ್ಟಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.

ಜೂ.12ರಂದು ಶುಭ ಮುಹೂರ್ತದಲ್ಲಿ ದೈವಜ್ಞರಾದ ಕೆ, ಪ್ರಸಾದ ಕೆದಿಲಾಯ ಅವರು ಸ್ವತ: ಖರ್ಚಿನಿಂದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಮುಂದೆ ದಂಪತಿಗಳ ಉತ್ತಮ ಜೀವನ ನಡೆಸಲಿ ಎಂದು ಅವರು ಶುಭ ಹಾರೈಸಿದ್ದಾರೆ. ಇದೇ ವೇಳೆ ಮನೆ ನಿರ್ಮಾಣದಲ್ಲಿ ಮುತುವರ್ಜಿ ವಹಿಸಿ ಅವರಿಗೆ ಹೇಗಾದರೊಂದು ಮನೆ ನಿರ್ಮಾಣ ಆಗಬೇಕಿಂದಿದ್ದ ಯುವಕರಿಗೆ ಪ್ರೇರೇಪಣೆ ನೀಡಿ ಆಗಾಗ ಬಂದು ಕೆಲಸವನ್ನು ವೀಕ್ಷಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಗೃಹ ಹಸ್ತಾಂತರದಲ್ಲಿ ಉಪಸ್ಥಿತರಿದ್ದ ಎಸ್.ಐ. ರುಕ್ಮ ನಾಯ್ಕ್ ಅವರನ್ನು ಹಿಂ.ಜಾ.ವೇ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಅವಿರತ ಶ್ರಮ ವಹಿಸಿದ ಯುವಕರಿಗೂ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿ.ಹಿಂ.ಪ.ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ಪುತ್ತೂರು ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣ ಕುತ್ಯಾಡಿ, ಹಿಂ.ಜಾ.ವೇ. ಕಡಬ ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರದಾಸ್ ಪೂಂಜಾ, ಕಾರ್ಯದರ್ಶಿ ಜಿನಿತ್ ಮರ್ದಾಳ ಪ್ರಮುಖರಾದ ರಘುರಾಮ ನಾಕ್, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.