ಈ ಹುಡುಗಿಯ ಹೊಟ್ಟೆಯಲ್ಲಿ 2 ಕೆಜಿ ಕೂದಲು | ಅಷ್ಟು ಕೂದಲು ಹೊಟ್ಟೆಯೊಳಕ್ಕೆ ಯಾಕೆ- ಹೇಗೆ ಹೋಯಿತು ಗೊತ್ತೇ ?!
ಹೈದರಾಬಾದ್: ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು ‘ರಾಪುಂಜೆಲ್ ಸಿಂಡ್ರೋಮ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲನ್ನು ತೆಗೆದು ಹಾಕುವುದರ ಮೂಲಕ ಹುಡುಗಿಗೆ ಪುನರ್ ಜನ್ಮ ಸಿಕ್ಕಿದೆ.
ಆ ಹುಡುಗಿಯು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಆ ಅಪ್ರಾಪ್ತ ಬಾಲಕಿ ಹೊಟ್ಟೆ ಹಸಿವು ತಾಳಲಾರದೆ ತನ್ನ ಕೂದಲನ್ನು ಸೇವಿಸುತ್ತಾ ಬಂದಿದ್ದಾಳೆ. ಶಂಶಾಬಾದ್ನ ಹುಡುಗಿ ಕಳೆದ 5 ತಿಂಗಳಿಂದ ಕೂದಲನ್ನು ತಿನ್ನುತ್ತಾ ಬಂದಿದ್ದಾಳೆ. ಹೀಗಾಗಿ ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ ಅವರನ್ನೊಳಗೊಂಡ ವೈದ್ಯರ ತಂಡವು 150 ಸೆಂ.ಮೀ ಉದ್ದದ ಸುಮಾರು 2 ಕೆಜಿ ಕೂದಲನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
150 ಸೆಂ.ಮೀ ಕೂದಲಿನಲ್ಲಿ ಪೈಕಿ 30 ಸೆಂ.ಮೀ ಹೊಟ್ಟೆಯಲ್ಲಿ ಮತ್ತು 120 ಸೆಂ.ಮೀ ಸಣ್ಣ ಕರುಳಿನಿಂದ ಜೂನ್ 2ರಂದು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ವಾಂತಿ ಮತ್ತು ಹೊಟ್ಟೆ ನೋವಿನಿಂದಾಗಿ ಒಂದು ತಿಂಗಳ ಹಿಂದೆ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಸ್ವಂತ ಕೂದಲನ್ನು ಹುಡುಗಿ ತಿನ್ನುತ್ತಿದ್ದಳು ಎಂದು ಆಕೆಯ ಸಹೋದರಿ ಮಾಹಿತಿ ನೀಡಿದ್ದಾಳೆ.
ಆಕೆ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಆಕೆಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಆಕೆಗೆ ಮೊದಲು ಕೋವಿಡ್ ಚಿಕಿತ್ಸೆ ಕೊಡಿಸಿ ಅದರಿಂದ ಚೇತರಿಸಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ನಡೆದಿರುವ ಪ್ರಕರಣಗಳ ಪೈಕಿ ಹೊಟ್ಟೆಯಿಂದ ಹೊರತೆಗೆದಿರುವ ಅತಿ ಉದ್ದ ಕೂದಲಾಗಿದೆ. ಇದು ಹೊಟ್ಟೆಯಿಂದ ಸಣ್ಣ ಕರುಳಿನವರೆಗೂ ಹೋಗಿತ್ತು. ಜಗತ್ತಿನಾದ್ಯಂತ ಇಂತಹ 68 ಪ್ರಕರಣಗಳು ಮಾತ್ರ ಈವರೆಗೆ ವರದಿಯಾಗಿವೆ ಇಂದು ವೈದ್ಯಕೀಯ ತಂಡ ತಿಳಿಸಿದೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ರೋಗಿಗೆ ಅರಿವಳಿಕೆ ಮದ್ದು ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು ಎಂದು ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಅರಿವಳಿಕೆ ವಿಭಾಗದ ಐವರು ಹಿರಿಯ ಪ್ರಾಧ್ಯಾಪಕರು ಡಾ.ಪಾಂಡು ನಾಯಕ್, ಡಾ.ಕೆ.ರಾಣಿ, ಡಾ.ಜಿ.ಅನಿಲ್ ಕುಮಾರ್, ಮತ್ತು ಡಾ.ಪವನ್ ತಿಳಿಸಿದ್ದಾರೆ.