ಹಳಿಗಳಲ್ಲಿ ಸಾವು, ಪ್ರಯಾಣಿಕರ ಸರಕು ಕಳವು ಇಲಾಖೆಗೆ ಬಹುದೊಡ್ಡ ಸವಾಲು ಎಂದ ರೈಲ್ವೆ ಎಡಿಜಿಪಿ | ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಕರ್ನಾಟಕ ರೈಲ್ವೆ ಎಡಿಜಿಪಿ ಭಾಸ್ಕರ ರಾವ್ ಭೇಟಿ
ಮಂಗಳೂರು ಸೇರಿದಂತೆ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷಾ ಕಾಯ್ದೆಯಡಿ ಜನ ದಟ್ಟಣೆ ಇರುವಲ್ಲಿ ಸಿಸಿಟಿವಿ ಕ್ಯಾಮರಾ ಅಗತ್ಯವಾಗಿದೆ, ರೈಲ್ವೆ ಹಳಿಗಳಲ್ಲಿ ಸಾವು, ಪ್ರಯಾಣಿಕರ ಸರಕು ಕಳವು ಇಲಾಖೆಗೆ ಬಹುದೊಡ್ಡ ಸವಾಲು ಎಂದು ಕರ್ನಾಟಕ ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿದ ವೇಳೆ ಅವರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದರು.
ರೈಲ್ವೇ ನಿಲ್ದಾಣ ಹಾಗೂ ರೈಲುಗಳಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಅದು ತೃಪ್ತಿಕರವಾಗಿಲ್ಲ. ರೈಲ್ವೆ ಹಳಿಗಳಲ್ಲಿ ಸಾವು, ಪ್ರಯಾಣಿಕರ ಸರಕು ಕಳವು ರೈಲ್ವೆ ಪೊಲೀಸರಿಗೆ ಬಹುದೊಡ್ಡ ಸವಾಲಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೇ ಪೊಲೀಸ್ ಸಾಕಷ್ಟು ಕ್ರಮಗಳನ್ನು ವಹಿಸುತ್ತಿದೆ ಎಂದು ಅವರು ಹೇಳಿದರು.
ಸದ್ಯ ಕೊಂಕಣ ರೈಲ್ವೇ ತಮಗೆ ಸವಾಲಾಗಿದ್ದು, ಜೋಕಟ್ಟೆಯಿಂದ ಕಾರವಾರದವರೆಗೆ ರೈಲ್ವೇ ನಿಯಂತ್ರಣದಲ್ಲಿಲ್ಲ. ಅದಕ್ಕೆ ಅಧಿಸೂಚನೆಯಾಗಬೇಕಾಗಿದೆ. ಅಂತರ್ ರಾಜ್ಯ ಹಾಗೂ ಕೇಂದ್ರ ಸರಾಕರದ ಒಪ್ಪಂದದ ಮೇರೆಗೆ ಆಗಬೇಕಾಗಿದ್ದ ಅನುದಾನವನ್ನು ಕೊಂಕಣ ರೈಲ್ವೇಯಿಂದ ಬಿಡುಗಡೆ ಮಾಡಲಾಗಿಲ್ಲ. ಹಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಭಾಗದಲ್ಲಿ ರಕ್ಷಣೆ ನೀಡಲಾಗುತ್ತಿಲ್ಲ. ಮಂಗಳೂರು ನಗರ ಪೊಲೀಸರು, ಉಡುಪಿ ಹಾಗೂ ಕಾರವಾರ ಪೊಲೀಸರು ಈ ಕಾರ್ಯ ಮಾಡುತ್ತಿದ್ದಾರೆ. ತುರ್ತಾಗಿ ಇದನ್ನು ರೈಲ್ವೇ ಪೊಲೀಸ್ ನಿಯಂತ್ರಣಕ್ಕೆ ಪಡೆಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಈ ನಡುವೆ ರಾಜ್ಯದಲ್ಲಿ ರೈಲ್ವೇ ಜಾಲ ಹೆಚ್ಚಿದೆ. ಕೊಟ್ಟೂರು ಹರಿಹರ ಲೈನ್, ಬೀದರ್ ಕಲಬುರಗಿ ಲೈಇನ್ ಬಗ್ಗೆ ಅಧಿಸೂಚನೆಯಾದಾಕ್ಷಣ ರೈಲ್ವೇ ಜಾಲಕ್ಕೆ ಅನುಗುಣವಾಗಿ ರೈಲ್ವೇ ವಿಭಾಗದಲ್ಲಿ ಪೊಲೀಸ್ ಇಲಾಖೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯವನ್ನು ನಿರ್ವಹಿಸಲಿದೆ. ಸರಕಾರಿ ರೈಲ್ವೇ ಪೊಲೀಸ್ ಕೇಂದ್ರ(ಜಿಆರ್ಪಿ) ಮತ್ತು ರೈಲ್ವೇ ಪೊಲೀಸ್ ಉತ್ತಮ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಜಿಆರ್ಪಿಯವರು ರೈಲ್ವೇ ಆಸ್ತಿಯ ರಕ್ಷಣೆ ಮಾಡುತ್ತಿದ್ದರೆ, ಪ್ರಯಾಣಿಕರ ರಕ್ಷಣೆಯ ಹೊಣೆ ನಮ್ಮದಾಗಿದೆ ಎಡಿಜಿಪಿ ಭಾಸ್ಕರ ರಾವ್ ಹೇಳಿದರು.
ಬಾಲಿವುಡ್ ನಟ ಸೋನು ಸೂದ್ ಸಹಕಾರದಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಕ್ಷಿಪ್ರ ಆಮ್ಲಜನಕ ಕೇಂದ್ರ (ರ್ಯಾಪಿಡ್ ಆಕ್ಸಿಜನ್ ಸೆಂಟರ್)ವನ್ನು ಆರಂಭಿಸಲಾಗಿದೆ.
ಮಂಗಳೂರಿನಲ್ಲಿ ವೈದ್ಯಕೀಯ ವ್ಯವಸ್ಥೆ ಉತ್ತಮವಾಗಿದೆ. ಹಾಗಿದ್ದರೂ ಅದಕ್ಕೆ ಪೂರಕವಾಗಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ರಾಜ್ಯದಲ್ಲಿ ರೈಲ್ವೇ ಪೊಲೀಸರು ಪ್ರಯಾಣಿಕರ ಸುರಕ್ಷತೆಯ ಜತೆಗೆ ಕೊರೋನ ಲಾಕ್ಡೌನ್ ಈ ಸಂದರ್ಭದಲ್ಲಿ ಕಳೆದ 30 ದಿನಗಳಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ದಿನವೊಂದಕ್ಕೆ 2,000ದಂತೆ ಅಗತ್ಯವಿರುವವರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದು ಭಾಸ್ಕರ್ ರಾವ್ ತಿಳಿಸಿದರು.