ಜೂ.14 ರ ನಂತರ ಒಂದು ವಾರ ಲಾಕ್ಡೌನ್ ,ಸಂಸದರ,ಶಾಸಕರ ಸಭೆ ಬಳಿಕ ನಿಯಾಮವಳಿ- ಕೋಟ
ದ.ಕ. ಜಿಲ್ಲೆಯಲ್ಲಿ ಜೂ.14ರ ಬಳಿಕ ಬಹುತೇಕ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರಿಯಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ತೀವ್ರವಾಗಿರುವ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ನಡೆಸಿದ ವಿಡಿಯೊ ಕಾನ್ಫರೆನ್ಸ್ ಬಳಿಕ ಅವರು ಮಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದರು.
ಕೆಲವು ಕೈಗಾರಿಕೆಗಳನ್ನು ಹೊರತುಪಡಿಸಿ ಮತ್ತೆ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಜೂ.14ರ ಬಳಿಕ ಬಹುತೇಕ ಮತ್ತೆ ಒಂದು ವಾರಗಳ ಲಾಕ್ ಡೌನ್ ಮುಂದುವರಿಸಲಾಗುವುದು ಎಂದರು.
ಇದೇ ವೇಳೆ ಯಾವೆಲ್ಲ ಸೀಮಿತ ವಿಷಯಗಳಿಗೆ ಲಾಕ್ಡೌನ್ ನಿಂದ ರಿಯಾಯಿತಿ ನೀಡಬಹುದು ಎಂಬುದರ ಕುರಿತಂತೆ ಜೂ.11ರಂದು ಸಂಸದರು, ಶಾಸಕರ ಸಭೆ ಮಾಡಲಾಗುವುದು. ಸಭೆಯಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ಕೈಗಾರಿಕಾ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲವೊಂದು ಸಡಿಲಿಕೆ ಮಾಡುವ ಬಗ್ಗೆ ಚರ್ಚಿಸಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ.