ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ | ಅಕ್ರಮ ಟೆಲಿಫೋನ್ ಎಕ್ಸ್ಚೆಂಜ್ನಿಂದ ಇಲಾಖೆಗೆ ವಂಚನೆ | ದೇಶದ ಭದ್ರತೆಗೆ ದಕ್ಕೆ : ಇಬ್ಬರ ಬಂಧನ,ಸೊತ್ತು ವಶಕ್ಕೆ
ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ವಂಚನೆ ಹಾಗೂ ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕೇರಳದ ಮಲ್ಲಾಪುರಂ ಜಿಲ್ಲೆಯ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ತ್ರಿರುಪೂರ್ನ ಗೌತಮ್ (27) ಎಂದು ಗುರುತಿಸಲಾಗಿದೆ.
ಆರೋಪಿಗಳು ಬಿಟಿಎಂ ಲೇಔಟ್ನ 6 ಸ್ಥಳಗಳಲ್ಲಿ 32 ಸಿಮ್ ಕಾರ್ಡ್ಗಳನ್ನು ಅಳವಡಿಸುವಂತಹ 30 ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಟ್ಟುಕೊಂಡು 900ಕ್ಕೂ ಹೆಚ್ಚು ಮೊಬೈಲ್ ಸಿಮ್ ಕಾರ್ಡ್ಗಳನ್ನು ಅಳವಡಿಸಿಕೊಂಡು ಅದರಿಂದ ಅನಧಿಕೃತವಾಗಿ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ವಂಚನೆ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವುದಲ್ಲದೆ, ಇನ್ನಿತರ ಅನಧಿಕೃತ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಎಸಿಪಿ ವೇಣುಗೋಪಾಲ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜಾಲವನ್ನು ಬೇಧಿಸಿದ ಪೊಲೀಸರಿಗೆ 30 ಸಾವಿರ ನಗದು ಬಹುಮಾನ ನೀಡಲಾಗುವುದು. ಜತೆಗೆ, ಬಂಧಿತರಿಂದ 960 ಸಿಮ್ ಕಾರ್ಡ್ಗಳು, 30 ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.