ಹಿಂದೂ ಯುವತಿಯನ್ನು ಪ್ರೀತಿಸಲು ಪೀಡನೆ | ಯುವತಿಯ ಅಪ್ಪನ ಏಟಿಗೆ ಜೀವನ್ಮರಣ ಸ್ಥಿತಿಯಲ್ಲಿ ಫಿರೋಜ್ ಖಾನ್!
ತನ್ನ ಮಗಳ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ಹಿಂದೂ ಯುವತಿಯ ತಂದೆಯೋರ್ವ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ಕಲ್ಲಿನಾಯಜನಹಳ್ಳಿ ಬಳಿ ಈ ನಡೆದಿದೆ. ಬಸವಾಪುರ ಗ್ರಾಮದ ಫೀರೋಜ್ ಖಾನ್(26) ಹಲ್ಲೆಗೊಳಗಾದ ಯುವಕ. ಕಲ್ಲಿನಾಯಕನಹಳ್ಳಿಯ ಗಂಗಾಧರ್ ಎಂಬಾತ ಹಲ್ಲೆ ನಡೆಸಿದ್ದಾನೆ.
ಫಿರೋಜ್ ಖಾನ್ ಕಲ್ಲಿನಾಯಜನಹಳ್ಳಿಯ ಹಿಂದೂ ಯುವತಿ ಹಿಂದೆ ಬಿದ್ದಿದ್ದ ಹಾಗೂ ತುಂಬಾನೇ ಪೀಡಿಸುತ್ತಿದ್ದ. ಈ ವಿಷಯ ಆಕೆಯ ತಂದೆಯ ಗಮನಕ್ಕೆ ಬಂದಿದ್ದು, ಅವನನ್ನು ಕರೆದು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಕ್ಯಾರೇ ಎನ್ನದ ಯುವಕ ತನ್ನ ಚಾಳಿ ಮುಂದುವರೆಸಿದ್ದ. ಇದು ಆಕೆಯ ತಂದೆಗೆ ತುಂಬಾ ಸಿಟ್ಟು ತರಿಸಿತ್ತು. ಯುವಕನಿಗೆ ಹೇಗಾದರೂ ಬುದ್ಧಿ ಕಲಿಸಬೇಕೆಂದು ಯುವತಿಯ ತಂದೆ ಯೋಜನೆ ಹೂಡಿ, ದೊಡ್ಡಬಳ್ಳಾಪುರಕ್ಕೆ ಹೋಗಬೇಕು ಬಾ ಅಂತ ಫಿರೋಜ್ ಖಾನ್ ನನ್ನ ಕರೆಸಿಕೊಂಡಿದ್ದಾನೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಫಿರೋಜ್ ಖಾನ್ ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.
ಬಳಿಕ ಘಟನಾ ಸ್ಥಳದಿಂದ ಯುವತಿ ತಂದೆ ಗಂಗಾಧರ್ ಪರಾರಿಯಾಗಿದ್ದಾನೆ. ಆದರೆ ಫಿರೋಜ್ ಖಾನ್ ಅಂದು
ಇಡೀ ರಾತ್ರಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಬೆಳಗ್ಗೆ ಸ್ಥಳೀಯರು ಫಿರೋಜ್ ಖಾನ್ ನನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ.
ಸದ್ಯ ಫಿರೋಜ್ ಖಾನ್ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿ ಗಂಗಾಧರ್ ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.