ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ನಡೆದಿದೆ ಎಂದದ್ದೇ ತಪ್ಪಾಯ್ತು | ಕಾರು ನುಗ್ಗಿಸಿ ಕೊಲೆ ಮಾಡಿದನೇ ಗ್ರಾ. ಪಂ. ಅಧ್ಯಕ್ಷ ?!

ಕುಂದಾಪುರ : ರಾಜಕೀಯ ವೈಷ್ಯಮ್ಯಕ್ಕೆ ಓರ್ವ ಗ್ರಾಮಸ್ತನ ಹೆಣ ಬೀದಿಯಲ್ಲಿ ಬಿದ್ದಿದೆ. ಯಡಮೊಗೆಯ ಹೊಸಬಾಳು ನಿವಾಸಿ ಉದಯ ಗಾಣಿಗ (45) ಕೊಲೆಯಾದ ವ್ಯಕ್ತಿಯಾಗಿ ದ್ದಾರೆ.

ಇದೀಗ ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯಡಮೊಗೆ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೊಲೆಯೋ ಅಥವಾ ಆಕ್ಸಿಡೆಂಟ್ ?

ನಿನ್ನೆ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮನೆಯ ಎದುರಿನ ರಸ್ತೆಯ ಮೇಲೆ ಉದಯ ಗಾಣಿಗ ಅವರು ತಮ್ಮ ಕೆಲಸದ ಮೇಲೆ ನಿಂತಿದ್ದರು. ಆಗ ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷ ನಾದ ಪ್ರಾಣೇಶ್‌ ಯಡಿಯಾಳ ಏಕಾಏಕಿಯಾಗಿ ಕಾರು ನುಗ್ಗಿಸಿಕೊಂಡು ಬಂದಿದ್ದಾನೆ. ರಸ್ತೆಯ ಬದಿಯಲ್ಲಿ ನಿಂತಿದ್ದ ಉದಯ ಗಾಣಿಗ ಅವರು ಪಕ್ಕಕ್ಕೆ ಎಸೆಯಲ್ಪಟ್ಟ ಸ್ಥಿತಿಯಲ್ಲಿ ಬಿದ್ದಿದ್ದರು.
ಗಂಭೀರವಾಗಿ ಗಾಯಗೊಂಡು ರಸ್ತೆಯ ಪಕ್ಕ ಬಿದ್ದಿದ್ದ  ಉದಯ ಅವರನ್ನು ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುವ ಯತ್ನ ನಡೆಸಿದರಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಉದಯ ಗಾಣಿಗ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದರು.

ಮೇಲ್ನೋಟಕ್ಕೆ ನೋಡುವಾಗ ಇದು ಒಂದು ಅಪಘಾತ ಪ್ರಕರಣವಂತೆ ಕಾಣುತ್ತಿತ್ತು. ಆದರೆ ಕಾರು ನುಗ್ಗಿಸಿದ ಗ್ರಾಮ ಪಂಚಾಯತ್ ಸದಸ್ಯ ಘಟನೆಯ ನಂತರ ಸ್ಥಳದಿಂದ ಕಾರು ಬಿಟ್ಟು ಪರಾರಿಯಾಗಿದ್ದ. ಅಲ್ಲದೆ ಇತ್ತೀಚೆಗೆ
ಗ್ರಾ.ಪಂ.ನಲ್ಲಿ ನಡೆಯುವ ಅನ್ಯಾಯ, ಅಕ್ರಮಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಉದಯ ಗಾಣಿಗ ಬರಹ ಪ್ರಕಟಿಸಿ ಪ್ರಶ್ನಿಸುತ್ತಿದ್ದರು ಎಂದು ಜನ ಮಾತಾಡುತ್ತಿದ್ದಾರೆ. ಅಲ್ಲದೆ, ಬೋರ್ ವೆಲ್ ತೆಗೆಸುವ ಬಗ್ಗೆ ಉದಯ ಗಾಣಿಗ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಮಧ್ಯೆ ಈ ಹಿಂದೆ ವೈಯಕ್ತಿಕ ವೈಮನಸ್ಸು ಇತ್ತು. ಆದುದರಿಂದ ಇದು ಕೊಲೆಯಾಗಿರುವ ಶಂಕೆ ಬಲವಾಗಿದೆ.

ಉದಯ ಗಾಣಿಗ ಅವರ ಪತ್ನಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪತ್ನಿಯ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆದ್ರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಅಡಗಿಕೊಂಡಿದ್ದ. ನಿನ್ನೆ ತಡರಾತ್ರಿ 3 ಗಂಟೆಯ ಸಮಯದಲ್ಲಿ ಉಳ್ಳೂರು ಗ್ರಾ. ಪಂ ಸದಸ್ಯರೊಬ್ಬರ ಮನೆಯಲ್ಲಿ ಪ್ರಾಣೇಶ್ ಯಡಿಯಾಳ್ ನನ್ನು  ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ರಸಗೊಬ್ಬರ ಅಂಗಡಿಯನ್ನು ನಡೆಸುತ್ತಿದ್ದ ಅವರು ಕೃಷಿಕರಾಗಿದ್ದರು. ಸುತ್ತಮುತ್ತ ನಡೆಯುವ ಅವ್ಯವಹಾರವನ್ನು ಪ್ರಶ್ನಿಸುವ ಗುಣವನ್ನು ಅವರು ಹೊಂದಿದ್ದರು. ಉದಯ್‌ ವಿವಾಹಿತರಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave A Reply

Your email address will not be published.