ಐಟಿಐ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯೇ ಬದಲು | ಗ್ರೇಸ್ ಮಾರ್ಕ್ ನೀಡುವ ಬದಲು ಶೇ.95 ವಿದ್ಯಾರ್ಥಿಗಳನ್ನು ಅನುತ್ತೀರ್ಣ ಗೊಳಿಸಿದ ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ

ಐಟಿಐ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್‌ಸಿವಿಟಿ) ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧವೇ ಇಲ್ಲದ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡುವ ಬದಲು ಶೇ.95ಕ್ಕೂ ಅಧಿಕ ಮಂದಿಯನ್ನು ಅನುತ್ತೀರ್ಣಗೊಳಿಸಲಾಗಿದೆ.

ಎನ್‌ಸಿವಿಟಿ ಪಠ್ಯಕ್ರಮದಂತೆ ಸರ್ಕಾರಿ ಮತ್ತು ಖಾಸಗಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ಶಿಕ್ಷಣ ನೀಡಲಾಗುತ್ತದೆ. 2 ವರ್ಷದ ಶಿಕ್ಷಣದ ಬಳಿಕ ಅಂತಿಮ ಪರೀಕ್ಷೆಯನ್ನು ಎನ್‌ಸಿವಿಟಿ ನಡೆಸಿ ಪ್ರಮಾಣಪತ್ರ ನೀಡುತ್ತದೆ. 2018-19ನೇ ಸಾಲಿನಲ್ಲಿ ಐಟಿಐ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ 2021ರ ಜನವರಿಯಲ್ಲಿ ನಡೆದಿದ್ದು, ಮೇ 31ರಂದು ಫಲಿತಾಂಶ ಪ್ರಕಟಗೊಂಡಿದೆ.

ರಾಜ್ಯದಲ್ಲಿ ಐಟಿಐ ಇಲೆಕ್ಟ್ರಾನಿಕ್ಸ್ ವಿಭಾಗದ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇಲೆಕ್ಟ್ರಾನಿಕ್ಸ್ ಡ್ರಾಯಿಂಗ್ ಪ್ರಶ್ನೆಪತ್ರಿಕೆ ನೀಡಬೇಕಾಗಿತ್ತು. ಅದರ ಬದಲು ಎಲೆಕ್ಟ್ರಿಷಿಯನ್ ಇಂಜಿನಿಯರ್ ವಿಭಾಗದ ಎಲೆಕ್ಟ್ರಿಷಿಯನ್ ಇಂಜಿನಿಯರಿಂಗ್ ಡ್ರಾಯಿಂಗ್ ಪ್ರಶ್ನೆಪತ್ರಿಕೆ ನೀಡಿದ್ದೇ ಸಮಸ್ಯೆಗೆ ಮೂಲ ಕಾರಣ. ವಿದ್ಯಾರ್ಥಿಗಳು ಪರೀಕ್ಷೆ ಆದಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೈಸೂರಿನಲ್ಲಿರುವ ಉದ್ಯೋಗ ತರಬೇತಿ ಇಲಾಖೆ ವಿಭಾಗೀಯ ನಿಯಂತ್ರಣ ಕಚೇರಿಗೂ ಈ ಬಗ್ಗೆ ತಿಳಿಸಲಾಗಿತ್ತು. ಆಗ, ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಶ್ನೆಪತ್ರಿಕೆ ಬದಲಾಗಿರಬಹುದು, ಗ್ರೇಸ್ ಮಾರ್ಕ್ ನೀಡಬಹುದು, ನೀವು ಪರೀಕ್ಷೆ ಬರೆಯಿರಿ ಎಂದ ತಿಳಿಸಲಾಗಿತ್ತು. ಅದರಂತೆ, ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೆಲವು ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ. ಆದರೆ ಶೇ.95ಕ್ಕೂ ಅಧಿಕ ಮಂದಿ ಫೇಲ್ ಆಗಿದ್ದಾರೆ. ದಿಕ್ಕೇ ತೋಚದಂತಾಗಿರುವ ವಿದ್ಯಾರ್ಥಿಗಳು ಕಾಲೇಜುಗಳಿಗೆ ಫೋನ್ ಮಾಡುತ್ತಿದ್ದು, ಆಡಳಿತ ಮಂಡಳಿಗಳು ಉದ್ಯೋಗ ತರಬೇತಿ ಇಲಾಖೆ ವಿಭಾಗೀಯ ನಿಯಂತ್ರಣ ಕಚೇರಿಯನ್ನು ಸಂರ್ಪಸುತ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳ ಸಮಗ್ರ ಮಾಹಿತಿಯನ್ನು ಪಡೆದಿದ್ದಾರೆ.

ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಇನ್ನೂ ಒಂದು ವರ್ಷ ಕಾಯಲೇಬೇಕು. ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಾಯಂ ಉದ್ಯೋಗ, ಇಂಟರ್ನ್‌ಷಿಪ್‌ಗೆ ಎನ್ ಸಿವಿಟಿ ಪ್ರಮಾಣಪತ್ರ ಕಡ್ಡಾಯ. ಇತ್ತ ಉನ್ನತ ಕೌಶಲ, ತಾಂತ್ರಿಕ ಡಿಪ್ಲೊಮಾ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು.

ಈ ಫಲಿತಾಂಶವನ್ನು ಇಟ್ಟುಕೊಂಡು ಮುಂದೇನು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲದಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಎನ್ ಸಿವಿಟಿ ಇದಕ್ಕೊಂದು ಪರಿಹಾರ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Leave A Reply

Your email address will not be published.