ದ.ಕ. ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ | ಚುರುಕು ಪಡೆದುಕೊಂಡ ನಾಡದೋಣಿ ಮೀನುಗಾರಿಕೆ
ದ.ಕ.ಜಿಲ್ಲೆಯಲ್ಲಿ ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ಇರುವುದರಿಂದ ಸದ್ಯ ಸ್ಥಗಿತ ಗೊಂಡಿದ್ದರಿಂದ ನಾಡದೋಣಿ ಮೀನುಗಾರಿಕೆ ಚುರುಕು ಪಡೆದು ಕೊಂಡಿದೆ.
ಕೊರೊನಾ ಕರಿನೆರಳು, ಸೀಮೆಎಣ್ಣೆಯ ಅಭಾವದ ನಡುವೆ ಆರಂಭವಾಗಿರುವ ಈ ಬಾರಿಯ ನಾಡದೋಣಿ ಮೀನುಗಾರಿಕೆ ಮೀನು ಗಾರರಿಗೆ ಸಮಸ್ಯೆಯಾಗಲಿದೆ.
ಜೂ. 1ರಿಂದ ನಾಡದೋಣಿ ಮೀನುಗಾರಿಕೆ ನಡೆಸಲು ಅವಕಾಶವಿರುವುದರಿಂದ ನಾಡದೋಣಿಗಳು ಕಡಲಿಗಿಳಿದು ಮೀನು ಗಾರಿಕೆ ಆರಂಭಿಸಿವೆ.
ನಾಡದೋಣಿ ಮೀನುಗಾರಿಕೆ ಮಾಡುವವರಿಗೆ ದೊಡ್ಡ ಸಮಸ್ಯೆ ಸೀಮೆಎಣ್ಣೆ ಅಲಭ್ಯತೆ.
ಈ ಬಾರಿ ಕೆಲವು ತಿಂಗಳು ಸೀಮೆಎಣ್ಣೆ ದೊರೆತಿಲ್ಲ. ಸೀಮೆಎಣ್ಣೆ ಬಳಕೆ ಮಾಡದಂತೆ ಕೇಂದ್ರ ಸರಕಾರ ಸೂಚನೆ ನೀಡಿದ ಕಾರಣಕ್ಕೆ ಇದರ ಹಂಚಿಕೆಯೇ ಬಹುದೊಡ್ಡ ಸಮಸ್ಯೆಯಾಗಿದ್ದರಿಂದ ನಾಡದೋಣಿಗಳಿಗೆ ಸೀಮೆಎಣ್ಣೆಯೇ ಬೇಕಾಗಿರುವುದರಿಂದ ರಾಜ್ಯ ಸರಕಾರವು ಕೇಂದ್ರದ ವಿಶೇಷ ಅನುಮತಿ ಪಡೆದು ಸೀಮೆಎಣ್ಣೆ ಪಡೆಯುತ್ತಿದ್ದು, ಈ ಸಮಯದಲ್ಲಿ ಮೀನುಗಾರರಿಗೆ ಸೀಮೆಎಣ್ಣೆ ಸಿಗುವುದು ತಡವಾಗುತ್ತಿದೆ.
ಮಳೆಗಾಲ ಆರಂಭವಾಗುವ ಸಮಯ ದಲ್ಲಿ ಬೀಸುಬಲೆ ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ನಾಡದೋಣಿ ಯಲ್ಲಿ ತೆರಳಿ ಬೀಸುಬಲೆಯಲ್ಲಿ ಮೀನು ಹಿಡಿಯುವವರಲ್ಲದೆ ದಡದಲ್ಲಿದ್ದುಕೊಂಡೇ ಬೀಸುಬಲೆಯಲ್ಲಿ ಮೀನು ಹಿಡಿಯುವವರು ತುಂಬಾ ಜನ ಇದ್ದಾರೆ.
ನವಮಂಗಳೂರು ಬಂದರು, ಮಂಗ ಳೂರು ಮೀನುಗಾರಿಕೆ ದಕ್ಕೆ, ಉಳ್ಳಾಲ ವ್ಯಾಪ್ತಿಯಿಂದ ನಾಡದೋಣಿಗಳು ಕಡಲಿಗಿಳಿ ಯುತ್ತಿವೆ. ದ.ಕ. ಜಿಲ್ಲೆ ಯಲ್ಲಿ ಸುಮಾರು 1,800ರಷ್ಟು ನಾಡದೋಣಿಗಳಿದ್ದು, 50 ಸಾವಿರ ಮಂದಿ ಅವಲಂಬಿತರಾಗಿದ್ದಾರೆ. ನಾಡದೋಣಿ ಯಲ್ಲಿ ಮೀನುಗಾರಿಕೆಗೆ ತೆರಳುವವರು ಪ್ರತೀದಿನ ಮುಂಜಾನೆ ಹೊರಟು ಸಂಜೆ 4ರ ಒಳಗೆ ದಡ ಸೇರುತ್ತಾರೆ. 1 ನಾಡದೋಣಿಗೆ 25 ಸಾವಿರ ರೂ. ಮೌಲ್ಯದಿಂದ ಗರಿಷ್ಠ 50 ಸಾವಿರ ರೂ. ಮೌಲ್ಯದ ಮೀನು ಸಿಗುತ್ತವೆ.