ಹಣಕ್ಕಾಗಿ ಗಂಡನಮನೆಯವರ ಕಿರುಕುಳ | ಬೆಂಕಿ ಹಚ್ಚಿಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ
ಗಂಡನ ಮನೆಯವರು ಹಣಕ್ಕಾಗಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಸರ್ಕಾರಿ ಸ್ಟಾಫ್ ನರ್ಸ್ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿಯ ಶಿವಾಜಿ ನಗರದಲ್ಲಿ ನಡೆದಿದೆ.
38 ವರ್ಷದ ಇಂದಿರಾ ಎಂಬುವವರೇ ಆತ್ಮಹತ್ಯೆಗೈದ ನತದೃಷ್ಟ ಹೆಣ್ಮಗಳು.
ಈಕೆ ಸೇಡಂನ ಆಯುಷ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದು ತಿಂಗಳಿಗೆ 50 ಸಾವಿರ ರೂ. ಸಂಬಳ ಪಡೆಯುತ್ತಿದ್ದರು ಎನ್ನಲಾಗಿದೆ.
ಮೂಲತಃ ರಾಯಚೂರಿನ ಮಕ್ತಲ್ ಪೇಟ್‍ನವರಾದ ಇಂದಿರಾ ಅವರನ್ನು 2002ರಲ್ಲಿ ಕಲಬುರಗಿಯ ಸಂಜೀವರೆಡ್ಡಿ ಅವರಿಗೆ ಮದುವೆ ಮಾಡಿಕೊಳ್ಳಲಾಗಿತ್ತು.
ಸಿವಿಲ್ ಗುತ್ತಿಗೆದಾರನಾದ ಪತಿ ಸಂಜೀವರೆಡ್ಡಿ, ಮನೆಯ ಮಹಡಿ ಮೇಲೆ ಮತ್ತೊಂದು ಮನೆ ಕಟ್ಟಿಸುತ್ತಿದ್ದಾರೆ. ಇದಕ್ಕಾಗಿ ಹಣ ತರುವಂತೆ ಸಂಜೀವರೆಡ್ಡಿ ಮತ್ತು ಮನೆಯವರು ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಇಂದಿರಾ ಬುಧವಾರ ರಾತ್ರಿ ಮನೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿದ ಕುಟುಂಬದವರು, ಕಲಬುರಗಿ ನಗರಕ್ಕೆ ಆಗಮಿಸಿದ್ಧಾರೆ. ಪತಿ ಸಂಜೀವರೆಡ್ಡಿ, ಈತನ ತಾಯಿ ಶಾಂತಾ ಬಾಯಿ, ತಮ್ಮ ಪರ್ವತ್ ರೆಡ್ಡಿ, ಪರ್ವತ್ ರೆಡ್ಡಿ ಪತ್ನಿ ರಾಧಾ ವಿರುದ್ಧ ಇಂದಿರಾ ಅವರ ತಾಯಿ ಲೀಲಾವತಿ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.