ಶಿಶಿಲ | ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದ ಮೀನುಗಳಿಗೆ ಆಹಾರದ ಕೊರತೆ, ಊರ ಪರವೂರ ಭಕ್ತಾದಿಗಳಿಂದ ಆಹಾರ ಪೂರೈಕೆ

ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿರುವ ದೇವರ ಮೀನೆಂದೇ ಪ್ರಸಿದ್ಧಿ ಪಡೆದಿರುವ ಪೆರುವೊಳು ಜಾತಿಯ ಮತ್ಸ್ಯಗಳು ಪ್ರವಾಸಿಗರಿಗೆ ಮುದ ನೀಡುತ್ತಿದ್ದವು. ಅವುಗಳನ್ನು ನೋಡಲೆಂದೇ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದರು.ಇಲ್ಲಿಗೆ ಆಗಮಿಸುತ್ತಿದ್ದ ಪ್ರವಾಸಿಗರು ಮತ್ಸ್ಯಗಳಿಗೆ ನಿತ್ಯ ಆಹಾರ ನೀಡಿ ಖುಷಿಪಡುತ್ತಿದ್ದರು.

ಆದರೆ, ಇದೀಗ ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳು ಭೇಟಿ ನಿಷಿಧ್ಧವಾಗಿದೆ.

ಹೀಗಾಗಿ ಕ್ಷೇತ್ರದ ಕಪಿಲಾ ನದಿಯಲ್ಲಿರುವ ಮೀನುಗಳಿಗೆ ಆಹಾರದ ಕೊರತೆಯಾಗಬಾರದೆಂಬ ಉದ್ದೇಶದಿಂದ ಊರ ಪರವೂರಿನ ಭಕ್ತರ ವತಿಯಿಂದ ದೇವರ ಮೀನಿಗೆ ನಿತ್ಯ ಆಹಾರ ಒದಗಿಸುವ ಕಾರ್ಯ ನಡೆಯುತ್ತಿದೆ. ಪ್ರತಿದಿನವೂ ಎರಡು ಮೂರು ಭಕ್ತಾಧಿಗಳು ದೇವರ ಮೀನಿಗೆ ಹರಳು, ಅಕ್ಕಿ ಸಮರ್ಪಿಸುತ್ತಿದ್ದಾರೆ. ದೂರದ ಬೆಂಗಳೂರು ಹಾಗೂ ಗ್ರಾಮದ ಭಕ್ತಾಧಿಗಳೂ ಅಕ್ಕಿಯನ್ನು ಕಳುಹಿಸಿಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೀನಿವಾಸ ಮೂಡೆತ್ತಾಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ ಪೂಜಾರಿ, ಮತ್ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಜಯರಾಮ ನೆಲ್ಲಿತ್ತಾಯ ಮತ್ತು ಸಮಿತಿಯ ಸದಸ್ಯರು ಭಕ್ತಾಧಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮನಃಪೂರ್ವಕವಾಗಿ ಅಭಿನಂದಿಸಿದ್ದಾರೆ.

Leave A Reply

Your email address will not be published.