ಸುಬ್ರಹ್ಮಣ್ಯ: ಅಕ್ರಮ ನಾಡಕೋವಿ ಪ್ರಕರಣ | ಆರೋಪಿಗಳಿಗೆ ಜಾಮೀನು
ಕಡಬ : ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ನಾಡಕೋವಿ ತಯಾರಿಕೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ನಾಲ್ವರು ಆರೋಪಿಗಳಿಗೆ ಪುತ್ತೂರು ಸೇಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿಗಳಾದ ಗುತ್ತಿಗಾರಿನ ದಿವಾಕರ ಆಚಾರ್ಯ, ಬಿಳಿನೆಲೆಯ ಅಶೋಕ, ಹಾಸನದ ಚಂದನ್, ಸುಬ್ರಹ್ಮಣ್ಯದ ಕಾರ್ತಿಕ್ ಹಾಗೂ ಕೊಳ್ತಿಗೆ ಗ್ರಾಮದ ಪಾಲ್ತಾಡುನ ಲೋಹಿತ್ ಬಂಗೇರ ಎಂಬವರನ್ನು ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಜೋಗಿ ಅವರ ನೇತೃತ್ವದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಈ ಪೈಕಿ ಸುಳ್ಯ ತಾಲೂಕು ನಾಲ್ಕೂರು ಗುತ್ತಿಗಾರಿನ ದಿವಾಕರ ಆಚಾರ್ಯ ಎಂಬವರನ್ನು ವಿಚಾರಿಸಿದಾಗ ತಾನು ತನ್ನ ಕಬ್ಬಿಣದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಾಡ ಕೋವಿಯನ್ನು ತಯಾರಿಸುತ್ತಿದ್ದೇನೆಂದು ಮತ್ತು ತಯಾರಿಸಿದ ಕೋವಿಗಳ ಪೈಕಿ ಒಂದನ್ನು ಹಾಸನದ ಚಂದನ್‌ಗೆ ಮಾರಾಟ ಮಾಡಿದ್ದೇನೆಂದು, ಇನ್ನೊಂದನ್ನು ಕೊಳ್ತಿಗೆ ಗ್ರಾಮದ ಪಾಲ್ತಾಡು ನಿವಾಸಿ ಲೋಹಿತ್ ಬಂಗೇರಗೆ ನೀಡಿದ್ದೇನೆಂದು ತಪ್ಪೊಪ್ಪಿಗೆ ನೀಡಿದ್ದು, ಆ ಪ್ರಕಾರ ತನಿಖೆ ನಡೆಸಿದಾಗ ಅಕ್ರಮ ಕೋವಿಗಳು ಆರೋಪಿಗಳ ಸ್ವಾಧೀನದಲ್ಲಿದ್ದು ಅದನ್ನು ಜಪ್ತಿ ಮಾಡಿ ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆನ್ನಲಾದ ಆರೋಪದಡಿ ಬಂಧಿಸಿ ಆರೋಪಿಗಳನ್ನು ಮೇ.10ಮತ್ತು ಮೇ.12ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಪುತ್ತೂರು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರೊಡಾಲ್ಫ್ ಪಿರೇರಾರವರು ಆರೋಪಿಗಳಾದ ಅಶೋಕ, ಚಂದನ್, ಕಾರ್ತಿಕ್ ಹಾಗೂ ಲೋಹಿತ್ ಬಂಗೇರರವರಿಗೆ ತಲಾ 50,000 ರೂ. ಬಾಂಡ್ ಹಾಗೂ ಅಷ್ಟೆ ಮೊತ್ತದ ಜಾಮೀನು ನೀಡುವ ಶರ್ತದ ಮೇರೆಗೆ ಅವರ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಜೂ 8ರಂದು ಆದೇಶ ನೀಡಿದ್ದಾರೆ.
ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ ಮಾಚಿಲ, ಚಂಪಾ ವಿ.ಗೌಡ ಹಾಗೂ ರಾಜೇಶ್ ಬಿ.ಜಿ.ಯವರು ವಾದಿಸಿದ್ದಾರೆ.