ಬೆಂಗಳೂರು: ಕಾಲಿವುಡ್ ನ ನಟ ವಿಶಾಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕನ್ನಡದ ‘ಮನಸೆಲ್ಲಾ ನೀನೆ’ ಸಿನಿಮಾದಲ್ಲಿ ನಟಿಸಿರುವ ನಟಿ ಗಾಯತ್ರಿ ರಘುರಾಮ್ ಗಂಭೀರ ಆರೋಪ ಮಾಡಿದ್ದಾರೆ.
ವಿಶಾಲ್ ಹಾಗೂ ಆತನ ಗೆಳೆಯರು ಸೇರಿಕೊಂಡು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಸರಣಿ ಟ್ವಿಟ್ ಮಾಡಿರುವ ಅವರು, ‘ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಇವರದ್ದು’ ಎಂದಿದ್ದಾರೆ.
‘ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಮೊದಲಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು. ವಿಶಾಲ್ ಒಮ್ಮೆ ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಟಿಯರ ಸ್ಥಿತಿ ಹೇಗಿದೆಯೆಂದು. ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡು. ನೀನು ಮತ್ತು ನಿನ್ನ ಗೆಳೆಯರು ಅದೇ ಗುಂಪಿಗೆ ಸೇರಿದವರು. ಉಪಯೋಗಿಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಸಾಕಷ್ಟು ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ’ ಎಂದಿದ್ದಾರೆ.
ಅಲ್ಲದೇ ‘ನೀನು ಪದೇ-ಪದೇ ಪೀಡಿಸುವ ಕಾರಣದಿಂದ ನಟಿಯರು ನಿನ್ನಿಂದ ದೂರ ಓಡುತ್ತಾರೆ. ಈ ವಿಷಯ ನಿನಗೆ ಗೊತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ‘ಸಿನಿಮಾ ರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಸಬೇಕಿತ್ತು. ಆದರೆ ನೀನು ವಿಲನ್ ನಂತೆ ವರ್ತಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಮನಸೆಲ್ಲಾ ನೀನೇ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಗಾಯತ್ರಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಆನಂತರ ಬಿಜೆಪಿ ಸೇರಿಕೊಂಡು ರಾಜಕಾರಣಿ ಆಗಿದ್ದಾರೆ. ಹಾಗೆಯೇ ಈ ಬಾರಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದಿಂದ ಸುದ್ದಿಯಾಗಿದ್ದಾರೆ.
ವಿಶಾಲ್ ವೈಯಕ್ತಿಕ ಜೀವನದ ಬಗ್ಗೆ ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ. ವಿಶಾಲ್ ಗುಣದ ಬಗ್ಗೆ ಯಾರೇ ಮಾತನಾಡಿದರೂ ನಟ ಸುಮ್ಮನಿರುತ್ತಾನೆ. ಆದರೆ ಹಿಂದೆ ಏನು ಆಗುತ್ತಿದೆ ಎಂಬುವುದು ಮಾತ್ರ ಯಾರಿಗೂ ತಿಳಿಯದ ಸಂಗತಿ.