ಕಾಡಿಗೆ ಮೇಯಲು ಬಿಟ್ಟಿದ್ದ ಹಸುಗಳ ಜೊತೆಗೆ ಮನೆಗೆ ಬಂದ ವಿಶೇಷ ಅತಿಥಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕಿರುಗುಂದ ಗ್ರಾಮದ ಉದುಸೆ ರಾಜೇಗೌಡರ ಮನೆಗೆ ನಿನ್ನೆ ಸಂಜೆ ಮೇಯಲು ಬಿಟ್ಟಿದ್ದ ದನಗಳೊಂದಿಗೆ ವಿಶೇಷವಾದ ಅತಿಥಿಯೊಬ್ಬರು ಬಂದಿರುವುದು ಅಚ್ಚರಿ ಮೂಡಿಸಿದೆ.
ಎಂದಿನಂತೆ ಮನೆಯ ಸಮೀಪದ ಕಾಡಿಗೆ ಮೇಯಲು ಹೋಗಿದ್ದ ಹಸುಗಳ ಜೊತೆ ಮುದ್ದಾದ ಜಿಂಕೆಮರಿಯೊಂದು ಮನೆಗೆ ಬಂದುಬಿಟ್ಟಿದೆ. ಅಷ್ಟೇ ಅಲ್ಲದೆ ಅದು ನೇರವಾಗಿ ಮನೆಯೊಳಗೆ ಬಂದು ಬಿಟ್ಟಿದೆ. ದಿನಪೂರ್ತಿ ಮೇದಿದ್ದ ಹಸುಗಳು ಸಂಜೆ ಮನೆಗೆ ಬರುವಾಗ ಹಸುಗಳ ಜೊತೆ ಪುಟ್ಟ ಜಿಂಕೆಮರಿಯೂ ಬಂದಿದೆ. ಯಾರ ಭಯವಿಲ್ಲದೆ ಮನೆಯೊಳಗೆ ಬಂದು ಅಚ್ಚರಿ ಮೂಡಿಸಿದೆ.
ಜಿಂಕೆಮರಿಯನ್ನು ಕಂಡ ಮನೆಯವರು ಸಂತೋಷಗೊಂಡು ಮುದ್ದಾಡಿದ್ದಾರೆ. ಅದರೊಟ್ಟಿಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ರಾತ್ರಿ ಮನೆಯಲ್ಲೇ ಇರಿಸಿಕೊಂಡು ಜೋಪಾನ ಮಾಡಿದ್ದಾರೆ.
ಮರುದಿನ ಬೆಳಗ್ಗೆ ಹಸುಗಳೊಂದಿಗೆ ಜಿಂಕೆಮರಿ ಮನೆಗೆ ಬಂದ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಮುಟ್ಟಿಸಿದ್ದಾರೆ. ರಾಜೇಗೌಡರ ಮನೆಗೆ ಬಂದ ಅರಣ್ಯ ಸಿಬ್ಬಂದಿಗಳು, ಸುರಕ್ಷಿತವಾಗಿ ಜಿಂಕೆಮರಿಯನ್ನು ತಮ್ಮೊಡನೆ ಕರೆದೊಯ್ದಿದ್ದಾರೆ.
ಆಕಸ್ಮಿಕವಾಗಿ ಬಂದ ಈ ಅತಿಥಿಯನ್ನು ವಾಪಸ್ ಕಳುಹಿಸಲು ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಎಲ್ಲರೂ ಸಪ್ಪೆಮೋರೆಯೊಂದಿಗೆ ಅದನ್ನು ಕಳುಹಿಸಿ ಕೊಡಬೇಕಾಗಿ ಬಂತು. ಏಕೆಂದರೆ ಕೇವಲ ಒಂದು ದಿನವಷ್ಟೇ ಮನೆಯಲ್ಲಿದ್ದ ಈ ಪ್ರಾಣಿಯು ಮನೆಯವರೆಲ್ಲರ ಮನಸ್ಸು ಗೆದ್ದಿತ್ತು.