ದೇಶದಲ್ಲಿ ಜೂನ್ ತಿಂಗಳೊಂದರಲ್ಲೇ ಬರೋಬ್ಬರಿ 12 ಕೋಟಿ ಲಸಿಕೆ ಲಭ್ಯ
ಜನರಿಗೆ ಕೊರೊನಾ ಲಸಿಕೆಯ ಮಹತ್ವ ಗೊತ್ತಾಗಿ ಕೊನೆಗೂ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಕೊರತೆ ಮಾತ್ರ ಇದ್ದೇ ಇದೆ. ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದ್ದು, ಜೂನ್ನಲ್ಲಿ ಬರೋಬ್ಬರಿ 12 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲಸಿಕೆಗಳ ಬೃಹತ್ ಉತ್ಪಾದನೆ ಹಲವು ರಾಜ್ಯಗಳಿಗೆ ವರದಾನವಾಗಲಿದ್ದು, ಇದೀಗ ಎದುರಿಸುತ್ತಿರುವ ಕೊರತೆಯನ್ನು ತಗ್ಗಿಸಲಿದೆ. ಜೂನ್ ನಲ್ಲಿ 12 ಕೋಟಿ ಡೋಸ್ ಲಸಿಕೆ ಸಿಗಲಿದೆ. ಅಂದರೆ ಸರಿ ಸುಮಾರು ಈಗ ಭಾರತದ ಜನಸಂಖ್ಯಯ 8 % ಲಸಿಕೆ ಜೂನ್ ತಿಂಗಳಿನಲ್ಲಿ ತಯಾರಾಗಳಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದ ಪಾರ್ಟಿ ಜನರಿಗೆ ಲಸಿಕೆ ನೀಡಿ, ಇನ್ನೂ ಒಂದು ದೊಡ್ಡ ರಾಜ್ಯಕ್ಕೆ ಪೂರ್ತಿ ಲಸಿಕೆ ಹಂಚಬಹುದು.
ಈವರೆಗೆ ಎಷ್ಟು ಲಸಿಕೆ ಹಂಚಿಕೆ ?
ಕರ್ನಾಟಕದಲ್ಲಿ ಈವರೆಗೆ 18-44 ವರ್ಷ ವಯಸ್ಸಿನ 14.15 ಲಕ್ಷ ಜನ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶನಿವಾರ ಒಂದೇ ದಿನ 18-44 ವರ್ಷದ 9,075 ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
ಒಟ್ಟಾರೆಯಾಗಿ ಕೊರೊನಾ ಲಸಿಕೆಯ 3ನೇ ಹಂತ ಆರಾಂಭವಾದಾಗಿನಿಂದ ದೇಶಾದ್ಯಂತ 1.82 ಕೋಟಿ ಜನ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
ಉಳಿದ ರಾಜ್ಯಗಳಾದ ಬಿಹಾರ, ದೆಹಲಿ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ 18-44 ವರ್ಷದೊಳಗಿನ 10 ಲಕ್ಷಕ್ಕೂ ಅಧಿಕ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶನಿವಾರದ ವರೆಗೆ ದೇಶದಲ್ಲಿ 21.18 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದ ಒಟ್ಟು 21.18 ಕೋಟಿ ಡೋಸ್ ಲಸಿಕೆ ಪೈಕಿ, 98.61 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆ ಪಡೆದಿದ್ದು, 67.71 ಲಕ್ಷ ಜನ ಆರೋಗ್ಯ ಕಾರ್ಯಕರ್ತರು 2ನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 1.55 ಕೋಟಿ ಜನ ಫ್ರಂಟ್ಲೈನ್ ವಾರಿಯರ್ಸ್ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 84.87 ಲಕ್ಷ ಜನ ಫ್ರಂಟ್ ಲೈನ್ ವಾರಿಯರ್ಸ್ 2ನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ.
ದೇಶದಲ್ಲಿ ಒಟ್ಟು 18-44 ವರ್ಷದ 1.82 ಕೋಟಿ ಹಾಗೂ 9,373 ಜನ ಕ್ರಮವಾಗಿ ಮೊದಲ ಹಾಗೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 45-60 ವರ್ಷದ 6.53 ಕೋಟಿ ಹಾಗೂ 1.05 ಕೋಟಿ ಜನ ಕ್ರಮವಾಗಿ ಮೊದಲ ಹಾಗೂ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲ್ಪಟ್ಟ 5.84 ಕೋಟಿ ಹಾಗೂ 1.86 ಕೋಟಿ ಜನರು ಕ್ರಮವಾಗಿ ಮೊದಲ ಹಾಗೂ 2ನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.