ಕದ್ದ ಕಾರಿನಲ್ಲೇ ಸುತ್ತಾಡಿ ದರೋಡೆ | ಲಾಕ್‌ಡೌನ್ ವೇಳೆ ಖಾಕಿ ಪಡೆಗೆ ಸಿಕ್ಕಿ ಬಿದ್ದ ಖತರ್ನಾಕ್ ಗ್ಯಾಂಗ್

ಲಾಕ್‌ಡೌನ್ ವೇಳೆ ಒಬ್ಬೊಬ್ಬರೇ ಹೋಗುವ ವಾಹನ ಸವಾರರನ್ನು ಟಾರ್ಗೆಟ್ ಮಾಡಿಕೊಂಡು ಕಾರಿನಲ್ಲಿ ಬಂದು ಅಡ್ಡಗಟ್ಟಿ ಚೂರಿ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗೊಂದನ್ನು ಬೆಂಗಳೂರಿನ ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಮ್ಮದ್ ಯೂಸುಫ್ (19), ಮಹಮ್ಮದ್ (19), ಶ್ರೀನಿವಾಸ್ (22) ಹಾಗೂ ಸೈಯ್ಯದ್ ಸಾಹೇಬ್ (22) ಎಂದು ಗುರುತಿಸಲಾಗಿದೆ.

ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು,ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳಿಂದ 1 ಮಾರುತಿ ಆಲ್ಟೋ 800 ಕಾರು, 2 ದ್ವಿಚಕ್ರವಾಹನ, ಕೃತ್ಯಕ್ಕೆ ಬಳಸಿದ ಚೂರಿ ಸೇರಿ 5.30 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ತಂಡವನ್ನು ಬಂಧಿಸುವ ಮೂಲಕ ಇವರ ಮೈಸೂರು ನಗರದ 1 ಕಾರು ಕಳವು, ಹನುಮಂತನಗರದ 1 ಸುಲಿಗೆ, ಬ್ಯಾಟರಾಯನಪುರ ಠಾಣೆಯ 1 ದ್ವಿಚಕ್ರವಾಹನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಈ ಆರೋಪಿಗಳು ಮೈಸೂರಿನಲ್ಲಿ ಆಲ್ಟೋ 800 ಕಾರನ್ನು ಕಳ್ಳತನ ಮಾಡಿದ್ದರು. ಲಾಕ್‌ಡೌನ್ ಸಮಯದಲ್ಲಿ ಅದೇ ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ಸುತ್ತಾಡಿ ಒಂಟಿಯಾಗಿ ವಾಹನದಲ್ಲಿ ಓಡಾಡುತ್ತಿದ್ದವರನ್ನು ಗುರುತಿಸುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಚೂರಿ ತೋರಿಸಿ ದರೋಡೆ ಮಾಡಿ ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಲಾಕ್‌ಡೌನ್ ವೇಳೆ ಜನರ ಓಡಾಟ ಕಡಿಮೆ ಇರುವುದನ್ನು ಗಮನಿಸುತ್ತಿದ್ದ ಆರೋಪಿಗಳು ತಮ್ಮ ಬಗ್ಗೆ ಸುಳಿವು ಸಿಗುವುದಿಲ್ಲ ಎಂದು ಭಾವಿಸಿ ಅದೇ ಸಮಯದಲ್ಲಿ ಕೃತ್ಯ ಎಸಗುತ್ತಿದ್ದರು.

ಮೇ 29ರಂದು ರಾಮಾಂಜನೇಯಾ ಗುಡ್ಡದ ಬಳಿ ಚೆಕ್‌ಪೋಸ್ಟ್ ಹಾಕಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಅದೇ ದಾರಿಯಲ್ಲಿ 2 ದ್ವಿಚಕ್ರವಾಹನದಲ್ಲಿ ಆರೋಪಿಗಳು ಬಂದಿದ್ದರು.

ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ಶ್ರೀನಗರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಸ್ನೇಹಿತನನ್ನು ನೋಡಲು ಹಲಸೂರು ನಿವಾಸಿ ಶಬರೀಶ್ ಮೇ 25ರಂದು ಮುಂಜಾನೆ 5 ಗಂಟೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆಲ್ಟೋ ಕಾರಿನಲ್ಲಿ ಬಂದ ಆರೋಪಿಗಳು ಇವರನ್ನು ಅಡ್ಡಗಟ್ಟಿದ್ದರು. ಓರ್ವ ಆರೋಪಿ ಶಬರೀಶ್‌ನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಮತ್ತೋರ್ವ ಚೂರಿ ತೋರಿಸಿ ಹಲ್ಲೆ ಮಾಡುವುದಾಗಿ ಬೆದರಿಸಿ ಬೈಕ್ ಕೀ ಕಸಿದುಕೊಂಡು ಬೈಕ್‌ನೊಂದಿಗೆ ಪರಾರಿಯಾಗಿದ್ದರು. ಶಬರೀಶ್ ಈ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ತಂಡ ಇನ್ನಷ್ಟು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Leave A Reply

Your email address will not be published.