ಶವದ ಎದುರಲ್ಲೇ ಊಟ-ತಿಂಡಿ ಮಾಡಬೇಕಾದ ಶೋಚನೀಯ ಸ್ಥಿತಿ | ಇದು ಸೋಂಕಿತರ ಮತ್ತು ಸಂಬಂಧಿಕರ ಗೋಳು
ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೋನ ಎರಡನೇ ಅಲೆಯಿಂದಾಗಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ, ಅಲ್ಲದೆ ಪ್ರತಿದಿನ ಸಾವಿನ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಶೋಚನೀಯ ಸ್ಥಿತಿ ಎದುರಾಗಿದೆ. ಇದಕ್ಕೊಂದು ಉದಾಹರಣೆ ಇಲ್ಲಿದೆ.
ಚಿಕ್ಕಮಗಳೂರಿನ ಆಸ್ಪತ್ರೆಯೊಂದರಲ್ಲಿ ಡೆಡ್ ಬಾಡಿ ಪಕ್ಕದಲ್ಲಿಯೇ ಸೋಂಕಿತರು ಮತ್ತು ಸಂಬಂಧಿಕರು ಊಟ, ತಿಂಡಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕೊರೋನ ಆಸ್ಪತ್ರೆಯಲ್ಲಿನ ಈ ಅವಾಂತರಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೋಗಿಗಳ ಸಂಬಂಧಿಗಳು ಪಿಪಿಇ ಕಿಟ್ ಧರಿಸದೇ ಸೋಂಕಿತರ ಸಂಪರ್ಕ ಮಾಡುವ ದೃಶ್ಯಗಳು ಇಲ್ಲಿ ಕಾಣುತ್ತವೆ. ಬಳಿಕ ಹೊರಗಡೆ ಬಂದು ಸೋಂಕಿತರ ಸಂಬಂಧಿಕರು ಬಿಂದಾಸ್ ಆಗಿ ಓಡಾಡ್ತಿದ್ದಾರೆ. ಜನರ ಈ ರೀತಿಯ ಬೇಜವಾಬ್ದಾರಿಯಿಂದಲೇ ಕೊರೊನ ಹರಡುವ ಪ್ರಮಾಣ ಹೆಚ್ಚುತ್ತಿದೆ. ಆದರೆ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳದೆ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿಯಾಗಿದೆ ಎಂದು ಪ್ರಚಾರ ಮಾಡುವುದರಲ್ಲೇ ಬ್ಯುಸಿ ಇದ್ದಾರೆ.
ಆಸ್ಪತ್ರೆಯಲ್ಲಿ ಮೃತಪಟ್ಟವರ ದೇಹಗಳನ್ನು ಪರೀಕ್ಷೆಗೊಳಪಡಿಸಿದ ತಕ್ಷಣ ಬೇರೆ ಸ್ಥಳದಲ್ಲಿ ಇರಿಸಲು ವ್ಯವಸ್ಥೆ ಮಾಡುವುದು, ಸೋಂಕಿತರ ಒಬ್ಬರು ಸಂಬಂಧಿಕರಿಗೆ ಪಿಪಿಇ ಕಿಟ್ ಒದಗಿಸುವುದು ಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದರೆ ದೊಡ್ಡ ಸವಾಲು ಅಲ್ಲ ಎನ್ನುತ್ತಾರೆ ಸಾರ್ವಜನಿಕರು.
ಈ ರೀತಿ ಬೇಜವಾಬ್ದಾರಿತನದಿಂದ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂಬಂಧಪಟ್ಟವರು ತಕ್ಷಣ ಈ ಅವ್ಯವಸ್ಥೆಯನ್ನು ಸರಿ ಮಾಡಬೇಕಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.