ಬಾವಿಗೆ ಬಿದ್ದ ನಾಗರಹಾವು | ರೋಚಕ ಕಾರ್ಯಾಚರಣೆಯ ಮೂಲಕ ಹಾವಿನ ರಕ್ಷಣೆ
ಉಡುಪಿ: ನಾಗರಹಾವೊಂದು ಬಾವಿಗೆ ಬಿದ್ದಿದ್ದು, ಅದನ್ನು ರಕ್ಷಣೆ ಮಾಡುವ ರೋಚಕ ಕಾರ್ಯಾಚರಣೆಯೊಂದು ಇಂದು ನಡೆದಿದೆ.
ಉಡುಪಿ ಕುಕ್ಕೆಹಳ್ಳಿ ಸಮೀಪದ ಕೊರಗು ನಾಯಕ್ ಎಂಬವರಿಗೆ ಸೇರಿದ ಬಾವಿಯಲ್ಲಿ ಭಾರಿ ಗಾತ್ರದ ನಾಗರ ಹಾವು ಕಂಡುಬಂದಿದೆ. ಮೊದಲು ಅದು ಹಗ್ಗದ ತುಂಡು ಎಂದು ಅಂದುಕೊಂಡಿದ್ದರು. ನಂತರ ಅದು ನಾಗರಹಾವು ಬಿದ್ದಿದ್ದು ಎಂದು ಕನ್ಫರ್ಮ್ ಆಗಿದೆ. ಹಾವು ಆಹಾರ ಹುಡುಕುತ್ತಾ ಅತ್ತ ಬಂದಾಗ ಅದು ಬಾವಿಗೆ ಬಿದ್ದಿರಬಹುದು ಎನ್ನಲಾಗಿದೆ.
ನೀರಲ್ಲಿದ್ದ ಹಾವು ಮೇಲೆ ಬರಲು ಹೆಣಗಾಡುತ್ತಿದ್ದುದನ್ನು ಗಮನಿಸಿದ ಮನೆಯವರು ಮತ್ತು ಸ್ಥಳೀಯರು ಅದರ ರಕ್ಷಣೆಗೆ ಮುಂದಾಗಿದ್ದಾರೆ. ಅದೊಂದು ವಿಷಪೂರಿತ ಹಾವೆಂದು ಗೊತ್ತಿದ್ದರೂ ಜನರು ಅದನ್ನು ಲೆಕ್ಕಿಸದೆ ರಕ್ಷಣೆ ಮಾಡಿದ್ದಾರೆ. ಮಳೆ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳರಿಗೆ ಮನೆಯವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರ ನೇತೃತ್ವದಲ್ಲಿ ಹಾವನ್ನು ರಕ್ಷಣೆ ಮಾಡಲಾಯಿತು. ಮೊದಲು ಟಯರ್‌ವೊಂದನ್ನು ಎರಡು ಹಗ್ಗಗಳ ಮೂಲಕ ಬಾವಿಯೊಳಕ್ಕೆ ಇಳಿಸಲಾಯಿತು. ಬುಸುಗುಡುತ್ತಿದ್ದ ನಾಗರಹಾವು, ಟಯರ್ ಕೆಳಕ್ಕೆ ಇಳಿಸುತ್ತಿದ್ದಂತೆ ಅದರ ಮೇಲೆ ಹತ್ತಿ ಕೂತಿದೆ. ನಂತರ ಹಗ್ಗದ ಮೂಲಕ ಟೈರ್ ಸಮೇತ ಹಾವನ್ನು ಮೇಲಕ್ಕೆತ್ತಿ, ನಂತರ ಹಾವನ್ನು ಪೈಪ್‌ವೊಂದರ ಒಳಗೆ ಹೋಗುವಂತೆ ಮಾಡಲಾಗಿದೆ. ನಂತರ ಆ ಪೈಪ್ ನ ಮೂಲಕ ಹಾವನ್ನು ಸೆರೆ ಹಿಡಿದು ಬಳಿಕ ಕಾಡಿನೊಳಕ್ಕೆ ಬಿಡಲಾಗಿದೆ. ಸುರಿವ ಮಳೆಯನ್ನು ಲೆಕ್ಕಿಸದೆ ಬುಸುಗುಟ್ಟುತ್ತಿದ್ದ ಹಾವಿನ ರಕ್ಷಣೆ ಮಾಡಲಾಗಿದ್ದು, ಕೊನೆಗೂ ಹಾವು ಮತ್ತು ರಕ್ಷಣಾ ಕಾರ್ಯ ಕೈಗೊಂಡ ತಂಡ ಸೇಫ್ ಆಗಿದ್ದಾರೆ.