ಸುಳ್ಯ ಹಾಗೂ ಪುತ್ತೂರಿನ ಚಿನ್ನದಂಗಡಿಗಳಿಂದ ಕಳವು ಪ್ರಕರಣ | ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ಪುತ್ತೂರು ಹಾಗೂ ಸುಳ್ಯದ ಚಿನ್ನದಂಗಡಿಗಳಿಂದ ಕಳ್ಳತನ ನಡೆಸಿದ ಪ್ರಕರಣದಲ್ಲಿ ಇಬ್ಬರು ಆಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

ದ.ಕ.ಜಿಲ್ಲೆಯ ಸುಳ್ಯ ಹಳೆ ಬಸ್‌ನಿಲ್ದಾಣದ ಬಳಿಯಿರುವ ಮೋಹನ ಜ್ಯುವೆಲ್ಲರಿ ಮಾರ್ಟ್ ಅಂಗಡಿಯಿಂದ ನಡೆದಿದ್ದ ಚಿನ್ನಾಭರಣ, ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರ್ರಾಜ್ಯ ಕಳ್ಳರನ್ನು ಸುಳ್ಯದ ಪೊಲೀಸರು ಬಂಧಿಸಿದ್ದಾರೆ.

ಸುಳ್ಯದ ಮೋಹನ ಜ್ಯುವೆಲ್ಲರಿ ಮಾರ್ಟ್ ಅಂಗಡಿಯಿಂದ ರೂ.5.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರೂ.50ಸಾವಿರ ನಗದು ಕಳೆದ ಮಾರ್ಚ್ 30ರಂದು ಕಳ್ಳತನವಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಸುಳ್ಯದ ಪೊಲೀಸರು ತನಿಖೆ ಮುಂದುವರಿಸಿ ಇಬ್ಬರು ಅಂತರ್ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬು ತಾಲೂಕಿನ ಅಲೆಕ್ಕೋಡು ಗ್ರಾಮದ ನಲ್ಲಿಕುನ್ನಿ ತಕ್ಕಮೊಯೆಕಲ್ ನಿವಾಸಿ ತಂಗಚ್ಚ ಯಾನೆ ಮ್ಯಾಥ್ಯೂ ಯಾನೆ ಮಹಮ್ಮದ್ ಯಾನೆ ಬಶೀರ್ ಮತ್ತು ತ್ರಿಶೂರ್ ಜಿಲ್ಲೆಯ ಮುಕುಂದಪುರ ತಾಲೂಕಿನ ಅಂಬಳೂರು ಗ್ರಾಮದ ಹೊಯ್ಲಿ ಮನೆಯ ಶಿಬು ಬಂಧಿತರು.

ಪುತ್ತೂರಿನಿಂದಲೂ ಕಳವು

ಪುತ್ತೂರಿನ ಚಿನ್ನಾಭರಣ ಮಳಿಗೆಗಳಿಂದಲೂ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಬಂಧಿತ ಆರೋಪಿಗಳ ವಿಚಾರಣೆ ವೇಳೆ, ಪುತ್ತೂರಿನ ಜ್ಯುವೆಲ್ಲರಿ ಮಳಿಗೆಯಿಂದ ಕಳವು ಮಾಡಿರುವುದನ್ನು ಬಾಯಿ ಬಿಟ್ಟಿದ್ದಾರೆ.ಪುತ್ತೂರು ಕೋರ್ಟುರಸ್ತೆಯಲ್ಲಿ ಎರಡು ಚಿನ್ನಾಭರಣ ಮಳಿಗೆ, ಒಂದು ಚಿನ್ನ ಮೆಷಿನ್ ಕಟ್ಟಿಂಗ್ ಸಂಸ್ಥೆ, ಮುಖ್ಯರಸ್ತೆಯ ಒಂದು ಚಿನ್ನಾಭರಣ ಮಳಿಗೆಗಳಿಂದ ಕಳ್ಳತನವಾದ ಘಟನೆ ಮಾ.25ರಂದು ಬೆಳಕಿಗೆ ಬಂದಿತ್ತು.

ಶ್ರೀಧರ್ ಭಟ್ ಜ್ಯುವೆಲ್ಲರ್‍ಸ್ ಮತ್ತು ಶ್ರೀ ನವಮಿ ಜ್ಯುವೆಲ್ಲರಿ ವರ್ಕ್ಸ್‌ನಿಂದ ಮಾತ್ರ ಚಿನ್ನಾಭರಣ ಕಳವಾಗಿತ್ತು.ಶ್ರೀಧರ್ ಭಟ್ ಜ್ಯುವೆಲ್ಸರ್‍ಸ್ ಸಂಸ್ಥೆಯ ರೋಲಿಂಗ್ ಶೆಟರ್ ಬೀಗ ಮತ್ತು ಸ್ಲೈಡಿಂಗ್ ಗೇಟ್‌ನ ಬೀಗ ಒಡೆದು ಒಳನುಗ್ಗಿ ರೂ.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.ಅನಂತಾಡಿ ಮಾಮೇಶ್ವರ ವಾಸುದೇವ ಆಚಾರ್ಯ ಅವರ ಮಾಲಕತ್ವದ, ಕೋರ್ಟು ರಸ್ತೆಯ ಶ್ರೀ ನವಮಿ ಜ್ಯುವೆಲ್ಲರಿ ವರ್ಕ್ಸ್‌ಗೆ ನುಗ್ಗಿದ ಕಳ್ಳರು ರೂ.2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಮಳಿಗೆ ಮಾಲಕರು ನೀಡಿದ್ದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಪುತ್ತೂರಿನ ಕೋರ್ಟುರೋಡ್ ಜುಮ್ಮಾ ಮಸೀದಿ ರಸ್ತೆಯ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್‌ನಲ್ಲಿರುವ, ನಾಗೇಶ್ ಆಚಾರ್ಯ ಅವರ ಮಾಲಕತ್ವದ ತೃಪ್ತಿ ಜ್ಯುವೆಲ್ಲರಿ ವರ್ಕ್ಸ್ ಮತ್ತು ಅದೇ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್‌ನ ಮೇಲಂತಸ್ತಿನಲ್ಲಿರುವ ಕಾವು ನಿವಾಸಿ ಪ್ರಮೋದ್ ಅವರ ಮಾಲತಕ್ವದ ಹಿರಣ್ಯ ಕಟ್ಟಿಂಗ್ಸ್ ಆಂಡ್ ಜ್ಯುವೆಲ್ಲರ್‍ಸ್‌ನಲ್ಲಿ ಕಳವಿಗೆ ಯತ್ನ ನಡೆದಿತ್ತು.

ಕೇರಳ,
ತಮಿಳುನಾಡು, ಮಂಗಳೂರಿನಲ್ಲಿ ಮಾರಾಟ


ಚಿನ್ನಾಭರಣ ಮಳಿಗೆಯಿಂದ ಕಳವು ಮಾಡಿದ ಸೊತ್ತುಗಳನ್ನು ಕೇರಳ, ತಮಿಳುನಾಡು, ಮಂಗಳೂರಿನಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ತನಿಖೆ ಕಾರ್ಯಕ್ಕೆ ತೊಂದರೆ ಆಗಬಾರದು ಎಂದು ಪೊಲೀಸರು ಆರೋಪಿಗಳ ಸಹಿತ ಟಿ.ಟಿ ವ್ಯಾನ್ ಮಾಡಿ ತಮಿಳುನಾಡು, ಕೇರಳ, ಮಂಗಳೂರಿಗೆ ತೆರಳಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಮಂಗಳೂರಿನಲ್ಲಿ ಮಹಿಳೆಯೊಬ್ಬರ ಸಂಪರ್ಕ ಹೊಂದಿದ್ದ ಆರೋಪಿಗಳು ಆಕೆಗೆ ಆಭರಣ ನೀಡಿರುವುದಾಗಿ ಹೇಳಲಾಗಿದೆ.ಈ ವಿಚಾರ ಇನ್ನೂ ಖಚಿತವಾಗಿಲ್ಲ.


ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ಓರ್ವ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಇನ್ನೋರ್ವ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಭಾಸ್ಕರ್ ಒಕ್ಕಲಿಗ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಡಾ.ಗಾನಾ ಪಿ ಕುಮಾರ್‌ರವರ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತನಿರೀಕ್ಷಕ ನವೀನ್‌ಚಂದ್ರ ಜೋಗಿ ಮತ್ತು ಸುಳ್ಯ ಠಾಣಾ ಪಿ.ಎಸ್.ಐ ಹರೀಶ್ ಎಂ.ಆರ್,ರತನ್ ಕುಮಾರ್ ಮತ್ತು ಸಿಬ್ಬಂದಿಗಳು ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.