ಕುಟುಂಬದ ಸದಸ್ಯನ ಶವವನ್ನು ನದಿಗೆ ಬಿಸಾಕಿ ಕೈತೊಳೆದುಕೊಂಡ ಮನೆಯವರು
ಇತ್ತೀಚಿಗಷ್ಟೆ ಬಿಹಾರ್ ಹಾಗೂ ಉತ್ತರ ಪ್ರದೇಶದಲ್ಲಿ ನದಿಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವಗಳ ರಾಶಿ ತೇಲಿ ಬಂದ ಘಟನೆ ಮಾಸುವ ಮುನ್ನವೆ, ಪಿಪಿಇ ಕಿಟ್ ಧರಿಸಿದ ವ್ಯಕ್ತಿಯೋರ್ವ ನದಿಗೆ ಶವ ಎಸೆಯುತ್ತಿರುವ ಘಟನೆ ನಡೆದಿದೆ.
ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ರಪ್ತಿ ನದಿಯಲ್ಲಿ ಈ ರೀತಿಯಾಗಿ ಶವವನ್ನು ಎಸೆಯಲಾಗಿದೆ. ಈ ಘಟನೆ ಮೊನ್ನೆ ಮೇ.28 ರಂದು ನಡೆದಿದೆ. ಇಬ್ಬರು ವ್ಯಕ್ತಿಗಳು ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು ಬರ್ಲಾಂಪುರ ಜಿಲ್ಲೆಯ ಕೊಟವಾಲಿ ಸಮೀಪ ನದಿಗೆ ಬೀಸಾಡಿದ್ದಾರೆ. ಆ ಇಬ್ಬರು ದುಷ್ಕರ್ಮಿಗಳಲ್ಲಿ ಓರ್ವ ಪಿಪಿಈ ಕಿಟ್ ಧರಿಸಿದ್ದ.
ಈ ದೃಶ್ಯವನ್ನು ಯಾರೋ ದಾರಿಹೋಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ತೇಲಿಬಿಟ್ಟಿದ್ದಾರೆ.
ಆನಂತರ ತನಿಖೆ ನಡೆದು ನದಿಗೆ ಎಸೆಯಲಾದ ಶವ ಪ್ರೇಮನಾಥ್ ಎಂಬುವರದು ಎಂದು ಪೊಲೀಸರು ಗುರುತಿಸಿದ್ದಾರೆ. ಸಿದ್ದಾರ್ಥ್ ನಗರದ ನಿವಾಸಿಯಾಗಿದ್ದ ಈತನಿಗೆ ಮೇ.25 ರಂದು ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದ ಆತ ಮೇ. 28 ರಂದು ಸಾವನ್ನಪ್ಪಿದ್ದ.
ಕೋವಿಡ್ ನಿಯಮಾವಳಿಯಂತೆ ಪ್ರೇಮನಾಥ್ ಶವವನ್ನು ಅಂತ್ಯಕ್ರಿಯೆ ನಡೆಸಲು ಆತನ ಕುಟುಂಬದ ಸುಪರ್ದಿಗೆ ಒಪ್ಪಿಸಲಾಗಿತ್ತು. ಆದರೆ, ಆತನ ಕುಟುಂಬಸ್ಥರು ಶವಸಂಸ್ಕಾರ ಮಾಡುವ ಉಸಾಬರಿಗೆ ಹೋಗದೆ ಮೃತದೇಹವನ್ನು ನದಿಗೆ ಹಾಕಿದ್ದಾರೆ ಎಂದು ಬರ್ಲಾಂಪುರ ವೈದ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.