ಸುಳ್ಯದ ಜುವೆಲ್ಲರಿ ಕಳ್ಳತನ | ಹೊಟ್ಟೆನೋವು ಬಿಚ್ಚಿಟ್ಟ 35 ಗ್ರಾಂ ಆಭರಣಗಳ ರಹಸ್ಯ
ಚಿನ್ನ ಕದ್ದು ಸಿಕ್ಕಿ ಬಿದ್ದಿದ್ದ ಕಳ್ಳರಲ್ಲಿ ಓರ್ವ ಅಸೌಖ್ಯಕ್ಕೊಳಗಾಗಿ ಸ್ಕ್ಯಾನಿಂಗ್ ವೇಳೆ ಚಿನ್ನ ನುಂಗಿರುವ ವಿಷಯ ಬಹಿರಂಗ ಗೊಂಡ ಸ್ವಾರಸ್ಯಕರ ಘಟನೆ ನಡೆದಿದೆ.
ಸುಳ್ಯದ ಮೋಹನ್ ಶೇಟ್ ಜ್ಯುವೆಲ್ಲರಿ ಮಾರ್ಟ್ ನಲ್ಲಿ ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರು ಕಳ್ಳರನ್ನು ಪೋಲೀಸರು ಬಂಧಿಸಿದ್ದರು. ಅವರಲ್ಲಿ ತಂಗಚ್ಚನ್ ಎಂಬಾತನನ್ನು ನಿನ್ನೆ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಶಿಬು ಎಂಬ ಇನ್ನೊಬ್ಬ ಆರೋಪಿಯ ಮೆಡಿಕಲ್ ಮಾಡಿಸಲು ಬಾಕಿ ಇತ್ತು. ಅದನ್ನೂ ಕೂಡ ಮಾಡಿಸಿ ಇಂದು ಶಿಬುವನ್ನು ಕೋರ್ಟಿಗೆ ಹಾಜರುಪಡಿಸಲು ನಿರ್ಧರಿಸಲಾಗಿತ್ತು.
ಆದರೆ ನಿನ್ನೆ ಸಂಜೆ ಆತನಿಗೆ ಕಿಬ್ಬೊಟ್ಟೆಯಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿತು. ಮೊದಲಿಗೆ ಸರಕಾರಿ ಆಸ್ಪತ್ರೆಗೆ ಆತನನ್ನು ಪೊಲೀಸರು ಕರೆದೊಯ್ದಾಗ ಆತನಿಗೆ ಹರ್ನಿಯಾ ಆಗಿರಬಹುದೆಂದು ಅಂದಾಜಿಸಲಾಗಿತ್ತು. ಹಾಗೆ ಆಪರೇಶನ್ ಮಾಡಿಸಲೆಂದು ಆತನನ್ನು ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ರಾತ್ರಿ ಸ್ಕ್ಯಾನ್ ಮಾಡಿ ನೋಡುವಾಗ ಆತನಿಗೆ ಹರ್ನಿಯಾ ಏನೂ ಭಾವಿಸಿರಲಿಲ್ಲ. ಬದಲಿಗೆ ಆತನ ಕರುಳಿನಲ್ಲಿ ಚಿನ್ನ ಹಲವು ಆಭರಣಗಳು ಇರುವುದು ಗೊತ್ತಾಗಿದೆ. ಆರೋಪಿಯು ಯಾವ ಸಂದರ್ಭದಲ್ಲಿ ಚಿನ್ನದವನ್ನು ನುಂಗಿದನೆಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಿದೆ.
ಆ ಚಿನ್ನದ ಆಭರಣಗಳು ಹೊಟ್ಟೆಯಲ್ಲೇ ಇದ್ದು ಗುದದ್ವಾರದತ್ತಲೂ ಚಲಿಸದೆ ಇದೀಗ ಆಪರೇಶನ್ ಮಾಡಿ ಚಿನ್ನ ಹೊರತೆಗೆಯಬೇಕಾಗಿದೆ. ಅಲ್ಲಿನ ಅಸ್ಪತ್ರೆಯ ವೈದ್ಯರು ಆಪರೇಷನ್ ಮಾಡಿದ್ದು ಆತನ ಹೊಟ್ಟೆಯಿಂದ 35 ಗ್ರಾಂ ಗೂ ಅಧಿಕ ಚಿನ್ನದ ಆಭರಣಗಳನ್ನು ಹೊರತೆಗೆಯಲಾಗಿದೆ. ಚಿನ್ನಕ್ಕೆ ಕತ್ತರಿ ಹಾಕಿದವನ ಕರುಳಿಗೇ ಈಗ ಕತ್ತರಿ ಬೀಳುವಂತಾಗಿದ್ದು ವಿಶೇಷ.