ಹೈಕೋರ್ಟ್ ಮೆಟ್ಟಿಲೇರಿದ ಶಿರೂರು ನೂತನ ಮಠಾಧಿಪತಿ ನೇಮಕ ವಿಚಾರ | ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ, ಜೂ.2 ಕ್ಕೆ ಮುಂದಿನ ವಿಚಾರಣೆ
ಉಡುಪಿ: ಇಲ್ಲಿನ ಶಿರೂರು ಮಠಕ್ಕೆ 16 ವರ್ಷದ ವಟು ಒಬ್ಬರನ್ನು ಮಠಾಧಿಪತಿಯಾಗಿ ನೇಮಕ ಮಾಡಿರುವ ವಿಚಾರ ಈಗ ಹೈಕೋರ್ಟ್ ಮೆಟ್ಟಲೇರಿದೆ.
ಶಿರೂರು ಮಠದ ನಿಕಟ ಪೂರ್ವ ಯತಿ ದಿ.ಲಕ್ಷ್ಮೀ ವರ ತೀರ್ಥ ಸ್ವಾಮೀಜಿ ಅವರ ಸಹೋದರ ಲಾತವ್ಯ ಆಚಾರ್ಯ ಅವರು ಅಪ್ರಾಪ್ತ ಬಾಲಕನಿಗೆ ಒತ್ತಾಯದಿಂದ ಸನ್ಯಾಸ ದೀಕ್ಷೆ ನೀಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
16 ವರ್ಷದ ವಟುವೊಬ್ಬರನ್ನು ಮಠಾಧಿಪತಿ ಮಾಡಿರುವುದು ಕಾನೂನಾತ್ಮಕವಾಗಿ ಸರಿಯೇ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಉಡುಪಿ ಶೀರೂರು ಮಠಕ್ಕೆ 16 ವರ್ಷದ ವಟುವನ್ನು ಮಠಾಧಿಪತಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಜೂನ್ 2ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ನ್ಯಾಯಪೀಠವು ಹೇಳಿದೆ.