ಪತ್ರಕರ್ತರಿಗೆ ಪೊಲೀಸರಿಂದ ಹಲ್ಲೆ ಯತ್ನ ಆರೋಪ: ಪತ್ರಕರ್ತರ ಸಂಘ ಖಂಡನೆ,ಎಸ್ಪಿಗೆ ದೂರು

ಕೊಡಗಿನ ಮಡಿಕೇರಿ ಆರ್ಮಿ ಕ್ಯಾಂಟೀನ್ ಎದುರು ಅಗತ್ಯ ವಸ್ತುಗಳ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಮಾಜಿ ಸೈನಿಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಜಿಲ್ಲೆಯ ಇಬ್ಬರು ಯುವ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರಿಗೆ ದೂರು ಸಲ್ಲಿಸಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಜಿಲ್ಲಾ ಪತ್ರಕರ್ತರ ಸಂಘ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರಾದ ಜಿ.ಆರ್.ಪ್ರಜ್ಞಾ ಹಾಗೂ ಶಕ್ತಿ ದಿನಪತ್ರಿಕೆಯ ವರದಿಗಾರರಾದ ಜಿ.ಆರ್.ಪ್ರಜ್ವಲ್ ಅವರು ಮೊಬೈಲ್ ಕ್ಯಾಮರಾ ಮೂಲಕ ಚಿತ್ರೀಕರಣಕ್ಕೆ ತೊಡಗಿದ್ದಾಗ ಪೊಲೀಸರು ಐಡಿ ಕಾರ್ಡ್ ಇಲ್ಲವೆಂದು ಗದರಿಸಿದ್ದಲ್ಲದೆ ಏಕವಚನ ಬಳಕೆ ಮಾಡಿ ಮೊಬೈಲ್ ಕಸಿದುಕೊಂಡು ಹಲ್ಲೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇದಕ್ಕೆ ಪೂರಕವಾದ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

ಎಸ್ಪಿ ಭರವಸೆ

ಘಟನೆಯ ವಿವರವನ್ನು ಕೇಳಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಪಿ ಅವರು ಭರವಸೆ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಮಡಿಕೇರಿ ಹಾಗೂ ವಿರಾಜಪೇಟೆ ಸೇನಾ ಕ್ಯಾಂಟೀನ್‌ನಲ್ಲಿ ವಸ್ತುಗಳ ಖರೀದಿಗೆ ದೊಡ್ಡ ಸಂಖ್ಯೆಯಲ್ಲಿ ಮಾಜಿ ಸೈನಿಕರು ಹಾಗೂ ಅವರು ಕುಟುಂಬಸ್ಥರು ಜಮಾಯಿಸಿದ್ದರು. ಅಲ್ಲಿ ಯಾವುದೇ ಮಾರ್ಗಸೂಚಿಗಳು ಪಾಲನೆ ಆಗುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ಖಂಡನೆ

ಘಟನೆಗೆ ಸಂಬಂಧಿಸಿದಂತೆ ರಾಜ್ಯ ಪತ್ರಕರ್ತರ ಸಂಘವು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದು,ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

Leave A Reply

Your email address will not be published.