ಚಿನ್ನ- ಬೆಳ್ಳಿ ವ್ಯಾಪಾರಸ್ಥರಿಗೆ ಫುಲ್ ಶಾಕ್ | ಹಾಲ್ ಮಾರ್ಕ್ ಇಲ್ಲದಿದ್ದರೆ ಕ್ರಿಮಿನಲ್ ಕೇಸ್

ಚಿನ್ನಾಭರಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮಹಿಳೆಯರಿಗಂತೂ ಅಚ್ಚುಮೆಚ್ಚು. ಯಾವುದೇ ಸಮಾರಂಭವಿರಲಿ , ಮದುವೆ ಇತ್ಯಾದಿ ಕಾರ್ಯಕ್ರಮವಿರಲಿ, ಎಲ್ಲಾ ಕಡೆಗಳಲ್ಲೂ ಆಭರಣಗಳ ಬಗ್ಗೆ ಮಾತು ಇದ್ದೇ ಇರುತ್ತದೆ. ಆಭರಣಗಳು ಜನಜೀವನದಲ್ಲಿ ಅಷ್ಟೊಂದು ಹಾಸುಹೊಕ್ಕಾಗಿವೆ.

 

ನಮ್ಮ ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಆಭರಣ ಮಳಿಗೆಗಳಿವೆ. ಶೇ.90 ರಷ್ಟು ಚಿನ್ನಾಭರಣ ತಯಾರಕರು ಮತ್ತು ಮಾಲೀಕರು ಹಾಲ್‌ಮಾರ್ಕ್ ಪರವಾನಗಿ ಹೊಂದಿಲ್ಲ. ಈವೆರೆಗೆ ಶೇ.10 ಮಾಲೀಕರು ಮಾತ್ರವೇ ಪರವಾನಗಿ ಹೊಂದಿದ್ದಾರೆ. ಉಳಿದವರು ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅಂಥವರಿಗೆ ಕ್ರಿಮಿನಲ್ ಕೇಸ್, ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ ಹೇಳಿದ್ದಾರೆ.

ಚಿನ್ನ ಮತ್ತು ಬೆಳ್ಳಿ ಆಭರಣಗಳ ಪರಿಶುದ್ಧತೆ ಮತ್ತು ಗುಣಮಟ್ಟವನ್ನು ದೃಢೀಕರಿಸಲು ಜೂ.1 ರಿಂದ ಹಾಲ್ ಮಾರ್ಕ್ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಪರವಾನಗಿ ಪಡೆಯಲು ಆಭರಣ ಮಾಲೀಕರಿಗೆ ಮುಂದಿನ ನಾಲೈದು ತಿಂಗಳು ರಿಯಾಯಿತಿ ಸಿಗುವ ಸಾಧ್ಯತೆಯಿದೆ. ಆಭರಣ ತಯಾರಕರು, ಅಂಗಡಿ ಮಾಲೀಕರು, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಣ್ಣಪುಟ್ಟ ಆಭರಣ ಮಳಿಗೆಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವವರು ಕಡ್ಡಾಯವಾಗಿ ಹಾಲ್ ಮಾರ್ಕ್ ಪರವಾನಗಿ ನಿಯಮ ಪಾಲಿಸಬೇಕು.

ಹೀಗಾಗಿ ರಾಜ್ಯದ ಎಲ್ಲ ಆಭರಣ ತಯಾರಕರು ಹಾಗೂ ಚಿನ್ನ-ಬೆಳ್ಳಿ ಮಾರಾಟಗಾರರು ಕೂಡಲೇ ಹಾಲ್‌ಮಾರ್ಕ್ ಪರವಾನಗಿಯನ್ನು ಶೀಘ್ರವಾಗಿ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇದರ ಬಗ್ಗೆ ಉದಾಸೀನತೆ ತೋರಬಾರದು ಎಂದು ರಾಮಾಚಾರಿ ಹೇಳಿದ್ದಾರೆ.

ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್‌ಮಾರ್ಕ್ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್ ಕಡ್ಡಾಯ. ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ಧತೆಗೆ ಇದೊಂದು ಪ್ರಮಾಣ ಪತ್ರ.

ಹೀಗಾಗಿ ಈ ಪ್ರಮಾಣ ಪತ್ರ ಪಡೆಯುವುದು ಮುಖ್ಯವಾಗಿದೆ. ಪ್ರತಿಯೊಬ್ಬ ಚಿನ್ನ ವ್ಯಾಪಾರಿಯು ತನ್ನ ಚಿನ್ನಾಭರಣಗಳಲ್ಲಿ ಬಳಸಲಾಗಿರುವ ಚಿನ್ನದ ಶುದ್ಧತೆಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಹಾಲ್ ಮಾರ್ಕ್ ಪ್ರಮುಖ ಪಾತ್ರವಹಿಸುತ್ತದೆ.

Leave A Reply

Your email address will not be published.