ಅಲಿಘರ್ | ಮದ್ಯ ಸೇವಿಸಿದ ಬಳಿಕ ಎಂಟು ಜನರ ಸಾವು, ಹಲವರ ಸ್ಥಿತಿ ಗಂಭೀರ
ಪರವಾನಗಿ ಪಡೆದ ಮಾರಾಟಗಾರರಿಂದ ಮಾರಾಟವಾದ ನಕಲಿ ಮದ್ಯವನ್ನು ಸೇವಿಸಿದ ಬಳಿಕ ಶುಕ್ರವಾರ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಸಿಯಾದಲ್ಲಿ ಮಾರಾಟಗಾರರಿಂದ ಖರೀದಿಸಿದ ಮದ್ಯ ಸೇವಿಸಿದ ನಂತರ ಇಬ್ಬರು ಸಾವನ್ನಪ್ಪಿದ ಬಗ್ಗೆ ಲೋಧಾ ಪೊಲೀಸ್ ಠಾಣೆಗೆ ಬೆಳಿಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಡಿಐಜಿ ದೀಪಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಬಲಿಪಶುಗಳು ಟ್ರಕ್ ಚಾಲಕರಾಗಿದ್ದು, ಅವರು ಕೆಲಸಕ್ಕಾಗಿ ಅಲಿಗರ್-ತಪಾಲ್ ಹೆದ್ದಾರಿಯಲ್ಲಿ ಗ್ಯಾಸ್ ಡಿಪೋದಲ್ಲಿ ಜಮಾಯಿಸಿದ್ದರು ಎಂದು ಅವರು ಹೇಳಿದರು. ಆದರೆ, ಪೊಲೀಸರು ಮತ್ತು ಹಿರಿಯ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಕಾರ್ಸಿಯಾ ಮತ್ತು ಪಕ್ಕದ ಹಳ್ಳಿಗಳಲ್ಲಿ ಇನ್ನೂ ಆರು ಮಂದಿ ಸಾವನ್ನಪ್ಪಿದ್ದರು ಎಂದು ತಿಳಿಯಿತು. ಡಿಐಜಿ, ಪೊಲೀಸ್ ತಂಡಗಳನ್ನು ಆ ಪ್ರದೇಶಕ್ಕೆ ಕಳುಹಿಸಿಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಅಬಕಾರಿ ಉಪ ಆಯುಕ್ತ ಡಿ.ಶರ್ಮಾ ಅವರು ಪಿಟಿಐ ಜೊತೆ ಮಾತನಾಡಿ, ಐವರು ಗ್ರಾಮಸ್ಥರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಎಎಂಯು ನ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸ್ಥಳೀಯರ ಪ್ರಕಾರ, ಜನರು ಗುರುವಾರದಿಂದ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದ್ದಾರೆ. ನೆರೆಹೊರೆಯ ಹಳ್ಳಿಗಳ ಇತರರು ಸಹ ಮದ್ಯ ಸೇವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಮದ್ಯ ಸೇವಿಸಿದ ಹಲವು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.