ಮಂಗಳೂರಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ | ಚಾಲಕ ಸೇರಿದಂತೆ 14 ಮಂದಿಗೆ ಗಂಭೀರ ಗಾಯ
ಕಾರವಾರ: ಕುಮಟಾದ ರಾಷ್ಟ್ರೀಯ ಹೆದ್ದಾರಿ 66 ರ ಕೈರೆ ಬಳಿ ಲಾಕ್ಡೌನ್ ಸಂದರ್ಭ ಪೊಲೀಸರ ಕಣ್ಣು ತಪ್ಪಿಸಿ ಮಂಗಳೂರಿಗೆ ತೆರಳುತಿದ್ದ ಕಾರ್ಮಿಕರನ್ನು ತುಂಬಿದ್ದ ತೂಫಾನ್ ವಾಹನವೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಸೇರಿ 14 ಮಂದಿ ಮಹಿಳಾ ಕಾರ್ಮಿಕರು ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಕುಷ್ಟಗಿಯಿಂದ ಮಂಗಳೂರಿಗೆ 14 ಜನ ಕಟ್ಟಡ ಕಾರ್ಮಿಕರ ಕರೆದೊಯ್ಯುತ್ತಿದ್ದ ತೂಫಾನ್ ವಾಹನವನ್ನು ಚಾಲಕ ಅತೀ ವೇಗವಾಗಿ ಚಲಾಯಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಕೈರೆ ಬಳಿ ಪಲ್ಟಿ ಹೊಡೆದಿದೆ. ಕೊರೊನಾ ನಿಯಮ ಮೀರಿ ಹೆಚ್ಚು ಜನರನ್ನು ತುಂಬಿ ಕರೆದೊಯ್ಯುತಿದ್ದ ಸಂದರ್ಭ ಪೊಲೀಸರು ಹಿಡಿಯುವ ಭಯದಲ್ಲಿ ತೂಫಾನ್ ವಾಹನ ಚಾಲಕ ಅತೀ ವೇಗದಿಂದ ವಾಹನ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ.
ಘಟನೆಯಲ್ಲಿ ವಾಹನದ ಚಾಲಕ ಸೇರಿ 14 ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.