ಮಕ್ಕಳ ವಿಶೇಷ ತಜ್ಞ ವೈದ್ಯರ ಸಮಿತಿ ಸಭೆ | ಕೊರೋನ 3ನೆ ಅಲೆ ಎದುರಿಸಲು ಸಜ್ಜಾಗಿ: ಸಚಿವ ಕೋಟ

ಮಂಗಳೂರು : ತಜ್ಞ ವೈದ್ಯರ ಪ್ರಕಾರ ಕೊರೋನ 3 ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪ್ರರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ 3ನೆ ಅಲೆ ಎದುರಿಸಲು ಸಜ್ಜಾಗುವಂತೆ ಜಿಲ್ಲಾಡಳಿತಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೋವಿಡ್ 3 ನೇ ಅಲೆಯ ನಿಯಂತ್ರಣ ಹಾಗೂ ಮಕ್ಕಳ ವಿಶೇಷ ತಜ್ಞ ವೈದ್ಯರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲಾ ಮಕ್ಕಳಿಗೆ ಸೋಂಕು ತೀವ್ರವಾಗಿ ಹರಡಿದ್ದಲ್ಲಿ ಅವರಿಗೆ ಶುಶ್ರೂಷೆ ನೀಡುವುದು ಕಷ್ಟವಾಗಬಹುದು. ಹಾಗಾಗಿ ಐಸಿಯು ಬೆಡ್‌ಗಳು, ವೆಂಟಿಲೇಟರ್‌ಗಳು, ಎಚ್‌ಡಿಯು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವುದರೊಂದಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ಅದಕ್ಕಾಗಿ ಈಗಿನಿಂದಲೇ ಈ ಬಗ್ಗೆ ಸಜ್ಜಾಗಬೇಕು ಮತ್ತು ಜನಜಾಗೃತಿ ಮೂಡಿಸಬೇಕು ಎಂದು ಕೋಟ ತಿಳಿಸಿದರು.

ಮೂರನೇ ಅಲೆಯ ಚಿಕಿತ್ಸೆಗೆ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾಪ್ ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ ಕಾರ್ಯಪಡೆಗಳು ವ್ಯವಸ್ಥಿತ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ಈಗಾಗಲೇ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಬಗ್ಗೆ ಪ್ರಾಯೋಗಿಕ ಕಾರ್ಯ ಚಾಲ್ತಿಯಲ್ಲಿದೆ. ಇದು ಯಶಸ್ಸು ಕಂಡಲ್ಲಿ ಮುಂದಿನ ದಿನಗಳಲ್ಲಿ 18 ವರ್ಷದೊಳಗಿನ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಪಂ ಸಿಇಒ ಡಾ.ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.