ಕೋವಿಡ್ ನಿಯಮ ಉಲ್ಲಂಘಿಸಿ ಕ್ರಿಕೆಟ್ ಮೈದಾನದಲ್ಲಿ ಗುಂಪು, ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿ ಎಂದ ಗ್ರಾಪಂ ಪಿಡಿಒಗೆ ಹಲ್ಲೆ : ದೂರು ದಾಖಲು

ಕ್ರಿಕೆಟ್ ಮೈದಾನದಲ್ಲಿ ಚರ್ಚಿಸುತ್ತಿದ್ದ ಗುಂಪೊಂದರ ಬಳಿ ತೆರಳಿ ‘ಮಾಸ್ಕ್ ಹಾಕಿ’ ಎಂದು ಸಲಹೆ ನೀಡಿದ್ದಕ್ಕೆ 6 ಮಂದಿ ಯುವಕರ ತಂಡ ಮಲ್ಲೂರು ಗ್ರಾಪಂ ಪಿಡಿಒಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

 

ಈ ಘಟನೆ ದ.ಕ.ಜಿಲ್ಲೆಯ ಮಲ್ಲೂರುನಲ್ಲಿ ಮಂಗಳವಾದ ನಡೆದಿದೆ.

ಮಲ್ಲೂರು ಗ್ರಾಪಂ ಪಿಡಿಒ ರಾಜೇಂದ್ರ ಶೆಟ್ಟಿ (45) ಹಲ್ಲೆಗೊಳಗಾದವರು.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಪಿಡಿಒ ರಾಜೇಂದ್ರ ಶೆಟ್ಟಿ ಬದ್ರಿಯಾ ನಗರದಿಂದ ಉಳಾಯಿಬೆಟ್ಟು ಕಡೆಗೆ ಹೋಗುತ್ತಿದ್ದರು.

ಈ ಸಂದರ್ಭ ಬದ್ರಿಯಾ ನಗರ ಕ್ರಿಕೆಟ್ ಮೈದಾನದಲ್ಲಿ ಯುವಕರ ತಂಡವೊಂದು ಗುಂಪು ಸೇರಿ ಚರ್ಚಿಸುತ್ತಿದ್ದರು.

ಈ ವೇಳೆ ಆ ಪ್ರದೇಶಕ್ಕೆ ತೆರಳಿದ ಪಿಡಿಒ ‘ ಮಾಸ್ಕ್ ಹಾಕಿ. ಸುರಕ್ಷಿತ ಅಂತರ ಕಾಪಾಡಿ’ ಎಂದು ಸಲಹೆ ನೀಡಿದ್ದಾರೆ. ಇದನ್ನು ಯುವಕರ ತಂಡ ನಿರ್ಲಕ್ಷಿಸಿದಾಗ ಪಿಡಿಒ ತನ್ನ ಮೊಬೈಲ್‌ನಿಂದ ಫೋಟೋ ಕ್ಲಿಕ್ಕಿಸಿ ಮರಳಿ ಪಂಚಾಯತ್‌ಗೆ ತೆರಳಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ಗ್ರಾಪಂ ಕಚೇರಿಗೆ ಪಿಡಿಒ ಅವರಿಂದ ಮೊಬೈಲ್ ಕಸಿದು ಫೋಟೋ ಡಿಲೀಟ್ ಮಾಡಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.