ಕೃಷಿಕರಿಗೆ ಪುತ್ತೂರು ಎಪಿಎಂಸಿಯಿಂದ ಶೂನ್ಯ ಬಡ್ಡಿಯಲ್ಲಿ ಅಡಮಾನ ಸಾಲ : ದಿನೇಶ್ ಮೆದು
ಪುತ್ತೂರು : ಕೊರೋನ ಲಾಕ್ಡೌನ್ ಸಂಕಷ್ಟ ಕಾಲದಲ್ಲಿ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯು ಅಡಿಕೆ ಬೆಳೆಗಾರರಿಗೆ ಮತ್ತು ಊರಿನ ತರಕಾರಿ ಬೆಳೆಗಾರರಿಗೆ ಸಹಾಯವಾಗುವಂತೆ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.
ಅವರು ಬುಧವಾರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪುತ್ತೂರು ಶಾಸಕರ ಸೂಚನೆಯಂತೆ ಕೊರೋನ 1ನೇ ಅಲೆಯ ಸಂದರ್ಭದಲ್ಲಿ ಮಾಡಿದ ರೈತ ಪರ ಯೋಜನೆಯಂತೆ ಇದೀಗ 2ನೇ ಅಲೆಯ ಸಂದರ್ಭದಲ್ಲೂ ಶೂನ್ಯ ಬಡ್ಡಿ ದರದ ಅಡಮಾನ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ತುರ್ತು ಹಣದ ಅವಶ್ಯಕತೆ ಇದ್ದಲ್ಲಿ ಬೆಳೆಗಾರರ ಅಡಿಕೆಯನ್ನು ಎಪಿಎಂಸಿ ಗೋದಾಮಿನಲ್ಲಿ ಅಡಮಾನ ಇರಿಸಿ, ಅಡಮಾನ ಇರಿಸಿದ ಬೆಳೆಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.2 ಲಕ್ಷದ ವರಗೆ ಮೂರು ತಿಂಗಳ ಕಾಲದ ಅಲ್ಪಾವಧಿ ಸಾಲವನ್ನು ಪುತ್ತೂರು ಎಪಿಎಂಸಿ ನೀಡುತ್ತಿದೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ ಎಂದರು.
ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಸೋಮವಾರ, ಬುಧವಾರ ಮತ್ತು ಶನಿವಾರಗಳಂದು ವಾರದಲ್ಲಿ 3 ದಿನ ಊರಿನ ತರಕಾರಿಗಳನ್ನು ಖರೀದಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿರುವ ರಖಂ ತರಕಾರಿ ವ್ಯಾಪಾರಿಗಳು ಎಪಿಎಂಸಿ ಮಾರ್ಗದರ್ಶನದಂತೆ ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನ ಸಂದರ್ಭದಲ್ಲಿ ಪಡಿತರದಲ್ಲಿ ವಿತರಿಸಲಿರುವ 19 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ದಾಸ್ತಾನು ಇರಿಸಲು ಎಪಿಎಂಸಿಯಲ್ಲಿ ಉಚಿತ ಗೋದಾಮು ವ್ಯವಸ್ಥೆಯನ್ನು ಮಾಡಲಾಗಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚನೆಯಂತೆ ಎಪಿಎಂಸಿ ಆಡಳಿತ ಮಂಡಳಿಯು ಈ ವ್ಯವಸ್ಥೆಯನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ.