ಶಿಶಿಲದ ಮತ್ಸ್ಯ ಮಾರಣಹೋಮಕ್ಕೆ ಸಂದಿತು 25 ವರ್ಷ | ಇಲ್ಲಿದೆ ಆ ಕರಾಳ ಅನುಭವ
ನಾಡಿನ ಪ್ರಸಿದ್ಧ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲದ ಶಿಶಿಲೇಶ್ವರನ ಸನ್ನಿಧಿಯ ಕಪಿಲಾ ನದಿಯ ಮತ್ಸ್ಯ ಸಂಕುಲದಲ್ಲಿರುವ ಲಕ್ಷಾಂತರ ದೇವರ ಮೀನುಗಳೆಂದರೆ ಭಕ್ತರಿಗೆ ಅದೆಷ್ಟೋ ಭಕ್ತಿ ಮತ್ತು ಪ್ರೀತಿ. ಶಿಶಿಲೇಶ್ವರನ ಸಾನಿಧ್ಯಕ್ಕೆ ಬರುವ ಭಕ್ತರಿಗಿಂತಲೂ ದೇವರ ಮೀನುಗಳಿಗೆ ಆಹಾರಗಳನ್ನು ಹಾಕಿ ಆನಂದಿಸುವವರೇ ಹೆಚ್ಚು ಎಂದರೆ ತಪ್ಪಾಗಲಾರದು.
ಆದರೆ ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಶಿಶಿಲದ ಕಪಿಲ ನದಿಗೆ ರಕ್ಕಸ ಮನಸ್ಥಿತಿಯ ವ್ಯಕ್ತಿಗಳು ವಿಷಹಾಕಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆಸಿದ್ದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕರಾಳ ದಿನಗಳ ಬಗ್ಗೆ ಶಿಶಿಲ ನಿವಾಸಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಮ್ಮ ಫೇಸ್ಟುಕ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
“25.5.1996 ಇಂದಿಗೆ 25 ವರ್ಷ. ನಮ್ಮೂರ ಶಿಶಿಲ ದೇವಾಲಯದ ಕಪಿಲಾ ನದಿಗೆ ವಿಷ ಹಾಕಿ ಲಕ್ಷಾಂತರ ಮೀನುಗಳನ್ನು ಪಾಪಿಗಳು ಹತ್ಯೆ ಮಾಡಿದ್ದರು. ಇಡೀ ಕಪಿಲಾ ನದಿಯೆ ವಿಷದಿಂದ ತುಂಬಿತ್ತು.ಇಡೀ ಗ್ರಾಮದಲ್ಲೂ ವಿಷಗಾಳಿ. ಕುಡಿಯುವ ನೀರಿಗಾಗಿ ಟ್ಯಾಂಕರ್ ಬಂತು, ಸಾವಿರಾರು ವಾಹನಗಳ ಆಗಮನ, ಜನ ದೇವಾಲಯಕ್ಕೆ ಬಂದು ಪಾಪಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಆಗಲೇ ಮದ್ಯಾಹ್ನ 12 ಗಂಟೆ. ಎಲ್ಲಾ ಮೀನುಗಳು ವಿಲವಿಲ ಒದ್ದಾಡಿ ಸತ್ತು ಹೋಗಿದ್ದವು. ದೇವರ ಮೀನು ಸಂಪೂರ್ಣ ನಾಶವಾಗಿತ್ತು(15 ಲೋಡು). ಸಾವಿರಾರು ಜನ ಅದನ್ನು ಕಂಡು ಬೊಬ್ಬಿಡುತ್ತಿದ್ದರು. ರಾಜ್ಯದಲ್ಲಿಯೇ ದೊಡ್ಡ ಸುದ್ಧಿಯಾಯಿತು. ದೇವಾಲಯದ ಆಡಳಿತ ಮಂಡಳಿ, ಮತ್ಸ್ಯ ಹಿತರಕ್ಷಣಾ ವೇದಿಕೆ, ವಿಶ್ವಹಿಂದೂ ಪರಿಷತ್ತು, ಮೊದಲಾದ ಸಂಘಟನೆ ಹೋರಾಟದ ಮುಂಚೂಣಿಯಲ್ಲಿತ್ತು.ಪತ್ರಿಕಾ ತಂಡಗಳು, ಟಿ ವಿ ಮಾಧ್ಯಮದವರು, ಜಿಲ್ಲಾಧಿಕಾರಿ, ಸಹಾಯಕ ಕಮೀಶನರ್ ಪುತ್ತೂರು, ಜಿಲ್ಲಾ ಪೊಲೀಸ್ ಅಧಿಕಾರಿ, ಪೊಲೀಸ್ ವ್ಯಾನ್, ಸರಕಾರಿ ಅಧಿಕಾರಿಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಎಲ್ಲರೂ ಆಗಮಿಸಿದರು.
ಪೂಜ್ಯ ಧರ್ಮಾಧಿಕಾರಿಗಳು ಆಗಮಿಸಿ, ಮಮ್ಮಲ ಮರುಗಿದರು. ಪೇಜಾವರ ಶ್ರೀಗಳು ಆಗಮಿಸಿ, ಮತ್ಸ್ಯಗಳ ಮರು ಹುಟ್ಟಿಗೆ ಕಪಿಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದುರುಳರ ಬಂಧನಕ್ಕಾಗಿ ದೊಡ್ಡ ಹೋರಾಟ ಮಾಡಲಾಗಿತ್ತು. ಬೆಳ್ತಂಗಡಿ ತಾಲೂಕು ಕಚೇರಿ ಮುಂದೆ ತೀವ್ರ ಹೋರಾಟ ಮಾಡಿದ್ದೆವು.ಸುಮಾರು 15 ದಿನ ಮಡಿದ ಮತ್ಸ್ಯಗಳನ್ನು ನೀರಿನಿಂದ ತೆಗೆದು ಸುಮಾರು ಒಂದು ಸಾವಿರ ಮಂದಿ ಶ್ರಮದಾನದ ಮಾಲಕ ಮಣ್ಣಲ್ಲಿ ಮಣ್ಣು ಮಾಡಿದ್ದೆವು. ಮಡಿದ ಮುದ್ದು ಮತ್ತ್ವಗಳಿಗೆ “ಮತ್ಸ್ಯಸ್ಮಾರಕ” ಮಾಡಿ ಈಗಲೂ ಪೂಜಿಸುತ್ತಿದ್ದೇವೆ.
ಇಂದು ಮಡಿದ ಮತ್ತ್ವಗಳಿಗಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ಅವುಗಳಿಗೆ ಶಿಶಿಲ ಸ್ವಾಮಿ ಸದ್ಗತಿ ಕರುಣಿಸಲಿ…ಎಂದು ಪ್ರಾರ್ಥನೆ…” ಎಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.