ಜಮೀನು ಜಗಳಕ್ಕೆ ಸಾಲಾಗಿ ನಾಲ್ಕು ಹೆಣ ಬಿದ್ದವು | ಆಸ್ತಿಯ ಒಡೆತನಕ್ಕಾಗಿ ಸುದೀರ್ಘ ಬಡಿದಾಡಿದ ಇಬ್ಬರೂ ಸಾವು
ಹೊಳೆನರಸೀಪುರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ರಕ್ತದ ಕೋಡಿ ಹರಿದಿದ್ದು, ವ್ಯಾಜ್ಯದ ಜಮೀನಿನಲ್ಲಿ ಇದೀಗ ಬರಿಯ ರಕ್ತದ ವಾಸನೆ ತುಂಬಿದೆ. ಅಲ್ಲಿ ನಾಲ್ಕು ಜನರು ಜಾಗಕ್ಕಾಗಿ ಪರಸ್ಪರ ಬಡಿದಾಡಿಕೊಂಡು ವಿನಾಕಾರಣ ಮಡಿದಿದ್ದಾರೆ.
ಹಾಗೆ ಹಾಸನದ ಹೊಳೆನರಸೀಪುರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಮಲ್ಲೇಶ, ರವಿ, ಮಂಜೇಶ, ಮೃತ ವ್ಯಕ್ತಿಗಳಾಗಿದ್ದಾರೆ.
ಎರಡೂ ಕಾಲು ಎಕರೆ ಜಮೀನಿಗಾಗಿ ಗ್ರಾಮದಲ್ಲಿ ಪಾಪಣ್ಣ ಹಾಗು ಮಲ್ಲೇಶ್ ಕುಟುಂಬದ ನಡುವೆ ಜಗಳವಿತ್ತು. ಇಂದು ಮಲ್ಲೇಶ್ ಪರವಾಗಿ ನ್ಯಾಯಲಯದ ತೀರ್ಪು ಬಂದಿದ್ದರಿಂದ ಪಾಪಣ್ಣ ಹಾಗೂ ಸ್ವಾಮಿ ಗೌಡರ ಎನ್ನುವರು ಮಲ್ಲೇಶ ಕುಟುಂಬದ ಜೊತೆ ಜಮೀನಿನ ಬಳಿ ಜಗಳ ತೆಗೆದಿದ್ದಾರೆ.
ಜಮೀನಿನಲ್ಲಿ ಟ್ರ್ಯಾಕ್ಟರ್ ಉಳುವಾಗ ವಾದ-ವಿವಾದಗಳು ಎದ್ದು ಇವರಿಬ್ಬರ ಗುಂಪುಗಳ ನಡುವೆ ಜಗಳವಾಗಿ ಬಾಕು ತೆಗೆದುಕೊಂಡು ಪಾಪಣ್ಣನ ಕಡೆಯವರು ಕೋರ್ಟಿನಲ್ಲಿ ಗೆದ್ದ ಮಲ್ಲೇಶನ ಕಡೆಯವರಿಗೆ ಇರಿದಿದ್ದಾರೆ. ಕೊನೆಗೆ ಮಲ್ಲೇಶನ ಕಡೆಯಿಂದ ಪಾಪಣ್ಣನಿಗೂ ಚೂರಿ ಹೆಟ್ಟಲಾಗಿದೆ.
ಚಾಕು ಇರಿತಕ್ಕೆ ಒಳಗಾಗಿ ಅತೀವ ರಕ್ತಸ್ರಾವವಾಗಿದ್ದ ಮೂವರನ್ನು ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಮೂವರು ಮೃತಪಟ್ಟಿದ್ದಾರೆ. ಜಗಳ ತೆಗೆದು ಮೊದಲು ಅಟ್ಯಾಕ್ ಮಾಡಿದ್ದ ಪಾಪಣ್ಣ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಘಟನೆ ಹಾಸನ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ್ದು ಆಸ್ತಿಗಾಗಿ ದಾಯಾದಿಗಳು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂಬುದನ್ನು ತೋರಿಸಿದೆ. ವಿಚಿತ್ರ ಏನೆಂದರೆ, ಯಾವ ಜಾಗದ ಪಾರುಪತ್ಯಕ್ಕೆ ಆ ಇಬ್ಬರು ಓನರ್ ಗಳು ಇಷ್ಟು ಸಮಯ ಕೋರ್ಟಿನ ಒಳಗೆ ಮತ್ತು ಹೊರಗೆ ಬಡಿದಾಡಿದರೋ, ಅವರಿಗೆ ಕೊನೆಗೂ ಜಾಗ ದಕ್ಕಲಿಲ್ಲ. ಕಾರಣ ಆ ಇಬ್ಬರೂ ಇಂದು ನಡೆದ ಮಾರಾಮಾರಿಯಲ್ಲಿ ಸತ್ತಿದ್ದಾರೆ.
ಇದೀಗ ಮೃತದೇಹಗಳನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹೊಳೆನರಸೀಪುರ ಪೊಲೀಸ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.