“ಚಿಕಿತ್ಸೆಯ ವೆಚ್ಚ ಪಾವತಿಸಿದರೆ ಮಾತ್ರ ಮೃತದೇಹ ಹಸ್ತಾಂತರ” | ಷರತ್ತು ಒಡ್ಡಿದಲ್ಲಿ ಖಾಸಗಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ರಾಜ್ಯದ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾದಿಂದ ಮೃತಪಟ್ಟವರ ಮೃತದೇಹವನ್ನು ಹಸ್ತಾಂತರಿಸುವ ಮೊದಲು ಹಣಕ್ಕಾಗಿ ಒತ್ತಡ ಹೇರುವುದಾಗಿ ಹಲವಾರು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಆದೇಶವನ್ನು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಹೊರಡಿಸಿದ್ದಾರೆ.

ಈ ಬಗ್ಗೆ ಆದೇಶ ಹೊರಡಿಸಿರುವ ಅವರು ರಾಜ್ಯದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಸೋಂಕಿತರು ಮೃತಪಟ್ಟಲ್ಲಿ, ಆಸ್ಪತ್ರೆಯ ಹಾಗೂ ಚಿಕಿತ್ಸೆಯ ಬಾಕಿ ವೆಚ್ಚವನ್ನು ಪಾವತಿಸಿದ ನಂತರವೇ ಶವವನ್ನು ಸಂಬಂಧಿಕರಿಗೆ ನೀಡುವಂತೆ ಷರತ್ತನ್ನು ವಿಧಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಕರ್ನಾಟಕ ಪ್ರೈವೇಟ್ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ (ಕೆಪಿಎಂಇ), 2007 ಭಾಗ 11 (i) ಉಪ ಷರತ್ತು (vi) ರ ಅನ್ವಯ, ಮೃತ ವ್ಯಕ್ತಿಯ ದೇಹವನ್ನು ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಬಾಕಿ ಬಿಲ್ ಪಾವತಿಗೆ ಒತ್ತಾಯಿಸುವಂತಿಲ್ಲ / ಒತ್ತಡ ಹೇರುವಂತಿಲ್ಲ ಹಾಗೂ ಬಿಲ್ ಪಾವತಿ ಮಾಡದೆ ಇದ್ದ ಪಕ್ಷದಲ್ಲಿ ಮೃತದೇಹದ ಹಸ್ತಾಂತರ ಮಾಡಲು ನಿರಾಕರಿಸುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ.

ಆದ್ದರಿಂದ, ಇಂತಹ ಪ್ರಕರಣಗಳು ವರದಿಯಾದಲ್ಲಿ ಕೆಪಿಎಂಇ ಕಾಯ್ದೆಯ ನಿಯಮಾನುಸಾರ ಅಂತಹ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು (ಅಧ್ಯಕ್ಷರು – ಕೆಪಿಎಂಇ) ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ. ಇದರೊಂದಿಗೆ, ಈ ರೀತಿ ವರದಿಯಾದ ಪ್ರಕರಣಗಳ ಮಾಹಿತಿ ಹಾಗೂ ಕೈಗೊಂಡ ಕ್ರಮಗಳ ಕುರಿತು ವಾರಕ್ಕೆ ಒಂದು ಬಾರಿ, ರಾಜ್ಯ ಮಟ್ಟಕ್ಕೆ ವರದಿ ಸಲ್ಲಸಲು ಆದೇಶಿಸಲಾಗಿದೆ.

Leave A Reply

Your email address will not be published.