ಸಿಡಿಲಿಗೆ ಕರಟಿ ಹೋದ 150ಕ್ಕೂ ಮಿಕ್ಕಿ ಅಡಿಕೆ ಮರಗಳು l ಕಳೆದ ಎರಡು ವರ್ಷಗಳಿಂದ ಏಳು ಬಾರಿ ಸಿಡಿಲಿನ ಆಘಾತ
ಬೆಳ್ತಂಗಡಿ: ನಿರಂತರ ಸಿಡಿಲು ಗುಡುಗು ಸಹಿತ ಅಕಾಲಿಕ ಮಳೆಯ ಪ್ರಭಾವದಿಂದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪರಮುಖ ನಿವಾಸಿ ಕೃಷಿಕ ಮಚ್ಚಿಮಲೆ ಅನಂತ ಭಟ್ ಅವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು 150ಕ್ಕಿಂತ ಮಿಕ್ಕಿ ಮರಗಳು ಕರಟಿಹೋಗಿದೆ.
ಕಳೆದ ಕೆಲವು ದಿನಗಳ ಹಿಂದೆ ಸಿಡಿಲು ಬಡಿದ ಪರಿಣಾಮ ದಿನದಿಂದ ದಿನಕ್ಕೆ ಸುತ್ತಮುತ್ತಲ ವ್ಯಾಪ್ತಿಯ ಅಡಿಕೆ ಮರಗಳು ಸಂಪೂರ್ಣ ಹಾನಿಗೊಳಗಾಗುತ್ತಿದ್ದು, ಕೆಲ ಅಡಿಕೆ ಮರಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು ಅವುಗಳ ಬೆಳವಣಿಗೆಯು ಕುಂಠಿತಗೊಂಡಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಹಾನಿ ಸಂಭವಿಸಿದೆ.
ಇವರ ತೋಟಕ್ಕೆ ಕಳೆದ ಎರಡು ವರ್ಷಗಳಿಂದ ಏಳು ಬಾರಿ ಸಿಡಿಲಿನ ಆಘಾತವಾಗಿದ್ದು, 20 ವರ್ಷಗಳಷ್ಟು ಹಳೆಯ 300ರಿಂದ 400ಕ್ಕೂ ಅಧಿಕ ಅಡಿಕೆ ಗಿಡಗಳು ಈವರೆಗೆ ಕರಟಿವೆ. ಕೆಲವೊಮ್ಮೆ ಸೀಮಿತ ಅಡಿಕೆ ಗಿಡಗಳಿಗೆ ಹಾನಿಯಾದರೆ, ಈ ಬಾರಿ ಒಂದೇ ಸಿಡಿಲಾಘಾತಕ್ಕೆ 150ಕ್ಕೂ ಅಧಿಕ ಗಿಡಗಳಿಗೆ ಹಾನಿಯಾಗಿವೆ. ಸಿಡಿಲು ಬಡಿದು ಕನಿಷ್ಠ 6 ರಿಂದ 1ವರ್ಷ ವರೆಗೆ ಅದರ ಪರಿಣಾಮ ಇರುವುದರಿಂದ ಬಳಿಕವಷ್ಟೇ ಮರಗಳು ಸಾಯುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅನಂತ ಭಟ್ ಅವರು ತಿಳಿಸಿದ್ದಾರೆ.