ಆಸ್ಪತ್ರೆಯಿಂದ ಕರೆತಂದ ವೃದ್ದೆಯನ್ನು ದಾರಿಮಧ್ಯೆ ಬಿಟ್ಟು ಹೋದ ಆ್ಯಂಬುಲೆನ್ಸ್ ಚಾಲಕ
ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದ ವೃದ್ಧೆಯೊಬ್ಬರನ್ನು ಆ್ಯಂಬುಲೆನ್ಸ್ ಚಾಲಕನೊಬ್ಬ ದಾರಿಮಧ್ಯೆ ಬಿಟ್ಟು ಹೋದ ಅಮಾನವೀಯ ಘಟನೆ ಸೋಮವಾರಪೇಟೆಯ ಕಿರಗಂದೂರು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಕಿರಗಂದೂರಿನ 60 ವರ್ಷದ ಪೊನ್ನಮ್ಮ ಮೇ 15ರಂದು ತೀವ್ರ ಉಸಿರಾಟದ ತೊಂದರೆಯಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ,
ಗುಣಮುಖರಾದ ಮೇಲೆ ರವಿವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು.
ಆಸ್ಪತ್ರೆಯಿಂದ ಪೊನ್ನಮ್ಮ ಅವರ ಮನೆಗೆ ಮಾಹಿತಿ ನೀಡಿರಲಿಲ್ಲ. ಆ್ಯಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಸಂಜೆ 5 ಗಂಟೆಯ ಸುಮಾರಿಗೆ ಐಗೂರು ಜಂಕ್ಷನ್‍ನಲ್ಲಿ ಬಿಟ್ಟು ತೆರಳಿದ್ದಾನೆ ಎನ್ನಲಾಗಿದ್ದು, ಅಲ್ಲಿಂದ ವೃದ್ಧೆಯ ಮನೆಗೆ 2 ಕಿ.ಮೀ. ದೂರವಿದ್ದು, ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.
‘ಲಾಕ್‍ಡೌನ್ ಸಂದರ್ಭವಾಗಿರುವುದರಿಂದ ಆ ರಸ್ತೆಯಲ್ಲಿ ಜನ ಸಂಚಾರ ಇರುವುದಿಲ್ಲ. ಸಂಜೆ ಸಮಯದಲ್ಲಿ ಕಾಡಾನೆಗಳ ಕಾಟವೂ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿತ್ರಾಣಗೊಂಡಿರುವ ಅವರು ದಾರಿತಪ್ಪಿದ್ದರೆ ಯಾರು ಗತಿ. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇಂತಹ ನಿರ್ಲಕ್ಷ್ಯ ಸಲ್ಲದು’ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.