ಜುಲೈ ಮೂರನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆ!!?
ಕೊರೊನಾ ಎರಡನೇ ಅಲೆ ಅಬ್ಬರದಿಂದ ಮುಂದೂಡಲಾಗಿದ್ದ 12 ನೇ ತರಗತಿ ಪರೀಕ್ಷೆಯನ್ನು ನಡೆಸಲು ಬಹುತೇಕ ರಾಜ್ಯಗಳು ಸಮ್ಮತಿಸಿದ್ದು, ಜೂನ್ 1ರಂದು ನಿರ್ಧಾರ ಪ್ರಕಟಿಸಲಾಗುತ್ತದೆ. ಅಂದು ಪರೀಕ್ಷೆ ಯಾವ ಸ್ವರೂಪದಲ್ಲಿ , ಯಾವಾಗ ಮತ್ತು ಹೇಗೆ ನಡೆಯುತ್ತದೆ ಎಂಬ ಮಾಹಿತಿ ನೀಡಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ತಿಳಿಸಿದ್ದಾರೆ.
12ನೇ ತರಗತಿಯ ಸಿಬಿಎಸ್ಸಿ ಪರೀಕ್ಷೆಗಳು ಮತ್ತು ನಂತರದ ಪ್ರವೇಶ ಪರೀಕ್ಷೆಗಳನ್ನು ನಿರ್ಧರಿಸಲು ಭಾನುವಾರ ವರ್ಚುವಲ್ ಸಭೆ ಕರೆಯಲಾಗಿತ್ತು.ಈ ಸಭೆಯಲ್ಲಿ ಪರೀಕ್ಷೆ ನಡೆಸುವುದರ ಬಗ್ಗೆ ಶೇಕಡ 75 ರಾಜ್ಯಗಳು ಒಲವು ತೋರಿಸಿವೆ ಎಂದು ತಿಳಿದುಬಂದಿದೆ. ಉನ್ನತ ಸಭೆಯ ನಂತರ ದಿಲ್ಲಿ ಸರ್ಕಾರ ಮತ್ತು ಪರೀಕ್ಷೆಯ ಪರ ಮತ್ತು ಆಕ್ಷೇಪವಿರುವ ಪೋಷಕರ ಜೊತೆ ಸಭೆ ನಡೆಸಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಶಿಕ್ಷಣ ಸಚಿವರು ಮಾತನಾಡಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಿವರವಾದ ಸಲಹೆಗಳನ್ನು ಮೇ 25 ರೊಳಗೆ ಸಲ್ಲಿಸುವಂತೆ ಕೋರಲಾಗಿದೆ ಎಂದರು.
12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಕೇಂದ್ರವು ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಇರಿಸಿದೆ. 12ನೇ ತರಗತಿಯ ವಿದ್ಯಾರ್ಥಿಗಳು ಆಯ್ದ ಕೆಲವು ಪ್ರಮುಖ ವಿಷಯಗಳಲ್ಲಿ ಮಾತ್ರ ಪರೀಕ್ಷೆಗಳನ್ನು ಬರೆಯುವುದು ಒಂದು ಆಯ್ಕೆಯಾಗಿದ್ದರೆ,ಎರಡನೇ ಆಯ್ಕೆ ಕೇವಲ ಬಹು ಆಯ್ಕೆಯ ಪ್ರಶ್ನೆಗಳುಳ್ಳ ಪರೀಕ್ಷೆಯ ಮಾದರಿಯನ್ನಾಗಿಸಿ ಶಾಲೆಗಳಲ್ಲಿ ನಡೆಸುವುದು ಇನ್ನೊಂದು ಆಯ್ಕೆ. ಆಯಾ ರಾಜ್ಯಗಳಲ್ಲಿ ಕೊರೋನ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರ ಕೋರಿದೆ ಎಂದು ತಿಳಿದುಬಂದಿದೆ.
ಪ್ರಶ್ನೆ ಪತ್ರಿಕೆ ತಯಾರಿಯ ಸಿದ್ಧತೆಯನ್ನು ಪೂರ್ತಿಗೊಳಿಸಿರುವ ರಾಜ್ಯ ಶಿಕ್ಷಣ ಇಲಾಖೆ, ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಜೂನ್ ತಿಂಗಳಿನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ. ಹಾಗಿದ್ದರೂ ಈ ಬಗ್ಗೆ ಕಾದುನೋಡಬೇಕಿದೆ.