ಇನ್ನು ಮುಂದೆ ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್
ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೊನಾ ಅಲೆ ವ್ಯಾಪಕವಾಗಿ ಹರಡುತ್ತಿದೆ.
ಇದರ ಹೊಡೆತಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಂಗೆಡುವಂತಾಗಿದೆ. ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯದ ಸಮಸ್ಯೆಗಳನ್ನು ಮಾನವ ಸಂಕುಲ ಎದುರಿಸುತ್ತಿದೆ.
ಈ ಸಾಂಕ್ರಾಮಿಕ ಅವಧಿಯಲ್ಲಿ ಸೋಂಕಿತರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಜನರು ರಕ್ತದಲ್ಲಿನ ಆಮ್ಲಜನಕ ಮಟ್ಟ ಹಾಗೂ ಹೃದಯ ಬಡಿತ ಮಟ್ಟ ತಿಳಿಯಲು ಪಲ್ಸ್ ಆಕ್ಸಿಮೀಟರ್ ಸಾಧನದ ಮೋರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಪಲ್ಸ್ ಆಕ್ಸಿಮೀಟರ್ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಸದ್ಯ ಇದರ ಬೆಲೆಯೂ
ದುಬಾರಿಯಾಗುತ್ತಿದೆ.
ಹೀಗಿರುವಾಗ ನಿಮ್ಮ ಬಳಿ ಬಜೆಟ್ ಇಲ್ಲವಾದಲ್ಲಿ ಆಕ್ಸಿಮೀಟರ್ ಖರೀದಿಸಬೇಕಾದ ಅಗತ್ಯವಿಲ್ಲ. ಯಾಕಂದ್ರೆ ಮೊಬೈಲಿನಲ್ಲೇ ನಿಮ್ಮ ಆಕ್ಸಿಜನ್ ಲೆವೆಲ್ ಪತ್ತೆ ಮಾಡಬಹುದು.
ಹೌದು ಕೊಲ್ಕತ್ತಾ ಮೂಲದ ಹೆಲ್ತ್ ಸ್ಟಾರ್ಟಪ್ ಕಂಪನಿಯೊಂದು ಕೇರ್ ಫಿಕ್ಸ್ ವೈಟಲ್ಸ್ ಎಂಬ ಆ್ಯಪ್ ಡೆವೆಲಪ್ ಮಾಡಿದೆ. ಇದನ್ನು ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡು ರಕ್ತದಲ್ಲಿ ಆಕ್ಸಿಜನ್ ಲೆವೆಲ್, ಪಲ್ಸ್ ಲೆವೆಲ್ ಮತ್ತು ಉಸಿರಾಟದ ಲೆವೆಲ್ ಮಾನಿಟರ್ ಮಾಡಬಹುದು. ಹೀಗಾಗಿ ದುಬಾರಿ ದುಡ್ಡು ತೆತ್ತು ಇನ್ನು ಅಕ್ಸಿಮೀಟರ್ ಖರೀದಿಸುವ ಅಗತ್ಯವಿಲ್ಲ.
ವರದಿಯೊಂದರ ಪ್ರಕಾರ, ಈ ಆ್ಯಪ್ ನಲ್ಲಿ ಆಕ್ಸಿಜನ್ ರೇಟ್ ನೋಡಬೇಕಾದರೆ ಮಾಡಬೇಕಾಗಿದ್ದು ಇಷ್ಟೇ. ನಿಮ್ಮ ಸ್ಮಾರ್ಟ್ ಫೋನ್ ಹಿಂಬದಿಯಲ್ಲಿರುವ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಇರುವ ಕಡೆ ಬೆರಳು ಇಡಬೇಕು. ಕೈಬೆರಳು ಕ್ಯಾಮರಾದ ಎದುರು ಸುಮಾರು 40 ಸೆಕೆಂಡುಗಳ ಇಟ್ಟಾಗ ಲೈಟ್ ಸೆನ್ಸೆಟಿವಿಟಿಯ ಮೂಲಕ ಪಿಪಿಜಿ ಗ್ರಾಫ್ ಸಂಗ್ರಹಿಸುತ್ತದೆ.ಕೆಲವೇ ಕ್ಷಣಗಳಲ್ಲಿ ನಿಮ್ಮ ಆಕ್ಸಿಜನ್ ಸಾಚ್ಯುರೇಶನ್ ಲೆವೆಲ್, ಪಲ್ಸ್ ಲೆವೆಲ್ ಮತ್ತು ಉಸಿರಾಟದ ದರ ಆ್ಯಪ್ ನಲ್ಲಿ ಡಿಸ್ ಪ್ಲೇ ಆಗುತ್ತದೆ.
ಈ ಆ್ಯಪ್ ಉಪಯೋಗಿಸಬೇಕಾದರೆ ನೋಂದಣಿ ಮಾಡಬೇಕಾಗುತ್ತದೆ. ವಿಶೇಷವೆಂದರೆ ಈಗಾಗಲೇ ಈ ಆ್ಯಪ್‌ನ್ನು 1200 ಜನರ ಮೇಲೆ ಪ್ರಯೋಗಿಸಿಯೇ ಬಿಡುಗಡೆ ಮಾಡಲಾಗಿದೆ. ಕೇರ್ ಫಿಕ್ಸ್ ವೈಟಲ್ ಶೇ. 96 ರಷ್ಟು ನಿಖರವಾಗಿ ಹಾರ್ಟ್ ರೇಟ್, ಶೇ.98ರಷ್ಟು ನಿಖರವಾಗಿ ಆಕ್ಸಿಜನ್ ಸ್ಯಾಚುರೇಶನ್ ರೇಟ್ ತೋರಿಸುತ್ತದೆ ಎಂದು ಹೇಳಲಾಗಿದೆ.